ಸಂತ್ರಸ್ತ ಬಾಲಕಿಯರಿಗೆ ತುರ್ತು ನ್ಯಾಯ ದೊರೆಯಲಿ
ಮಠದ ಪ್ರೌಢಶಾಲೆಯಲ್ಲಿ ಓದುತ್ತಾ, ಅಲ್ಲಿಯದೇ ಹೆಣ್ಣು ಮಕ್ಕಳ ವಸತಿನಿಲಯದಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಚಿತ್ರದುರ್ಗದ ಮುರುಘಾ ಮಠದ ಪೀಠಾಧ್ಯಕ್ಷರು ಹಾಗೂ ಇನ್ನಿತರ ನಾಲ್ವರ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿ ಈಗ ನಾಲ್ಕು ದಿನಗಳೇ ಕಳೆದಿದೆ. ಆದರೆ ಪೊಕ್ಸೋ ಕಾಯ್ದೆಯ ಅನೇಕ ವಿಶೇಷ ನಿಯಮಗಳನ್ನು ಚಿತ್ರದುರ್ಗದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಪೊಲೀಸ್ ಇಲಾಖೆ ತಕ್ಷಣಕ್ಕೆ ಅನುಷ್ಠಾನಗೊಳಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದೊಂದು ಸಂಜ್ಞೆಯ ಮತ್ತು ಜಾಮೀನುರಹಿತ ಅಪರಾಧವಾದ್ದರಿಂದ ಪೋಕ್ಸೋ ಪ್ರಕರಣ ದಾಖಲಾದ ೨೪ ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಬೇಕು. ಆದರೆ ಅದಕ್ಕೆ ಬದಲಾಗಿ ಪ್ರಕರಣದ ಪ್ರಮುಖ ಆರೋಪಿಯನ್ನು ತಮ್ಮ ವಾಸ ಸ್ಥಳ ಬಿಟ್ಟು ಇತರ ಜಿಲ್ಲೆಗಳ ಅಜ್ಞಾತ ಸ್ಥಳಗಳಲ್ಲಿ ಅಡ್ಡಾಡಲು ಬಿಟ್ಟಿರುವುದು, ಲೈಂಗಿಕ ದೌರ್ಜನ್ಯ ಪ್ರಕರಣದ ಅಗತ್ಯ ಸಾಕ್ಷ್ಯಗಳು ಸಿಕ್ಕ ನಂತರ ಆರೋಪಿಗಳನ್ನು ಬಂಧಿಸುತ್ತೇವೆಂದು ಚಿತ್ರದುರ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೇಳಿಕೆ ನೀಡಿರುವುದು ಹಾಗೂ ಆರೋಪಿಗಳು ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಮಠದಲ್ಲಿಯೇ ಇರುವ ಸಂದರ್ಭದಲ್ಲಿಯೇ ಸಂತ್ರಸ್ತ ಹೆಣ್ಣುಮಕ್ಕಳನ್ನು ಅಲ್ಲಿಗೆ ಕರೆದೊಯ್ದು ಸ್ಥಳ ಮಹಜರು ಮಾಡಿಸಿದ್ದು… ಈ ಎಲ್ಲವೂ ಅಸಹಾಯಕ ಸ್ಥಿತಿಯಲ್ಲಿರುವ ಸಂತ್ರಸ್ತ ಬಾಲಕಿಯರಿಗೆ ಬೆಂಬಲವಾಗಿ ನಿಲ್ಲಬೇಕಾದ ಸರ್ಕಾರಿ ವ್ಯವಸ್ಥೆ ಆರೋಪಿಗಳಿಗೆ ಬೆಂಬಲವಾಗಿ ನಿಂತಿರುವುದರ ಆತಂಕಕಾರಿ ನಡೆಯಾಗಿದೆ. ಪೋಕ್ಸೋ ಕಾಯ್ದೆಯನ್ವಯ ಆರೋಪಿಗಳನ್ನು ತಕ್ಷಣಕ್ಕೆ ಬಂಧಿಸದಿರುವ ಹಾಗೂ ಸೆಕ್ಷನ್ ೧೬೪ರ ಅಡಿಯಲ್ಲಿ ತುರ್ತಾಗಿ ಸಂತ್ರಸ್ತರ ಹೇಳಿಕೆ ದಾಖಲಿಸದೇ ಇರುವ ಮೂಲಕ, ಪ್ರಕರಣದ ಪ್ರಮುಖ ಆರೋಪಿಯು ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿರುವುದು ಅಕ್ಷಮ್ಯ. ಜೊತೆಗೆ ಈ ಪ್ರಕರಣದ ಪ್ರಮುಖ ಆರೋಪಿಯು ಪ್ರಕರಣ ದಾಖಲಾದ ದಿನದಿಂದ ತನ್ನ ಸಾವಿರಾರು ಬೆಂಬಲಿಗರೊಂದಿಗೆ ಸಭೆ ನಡೆಸಲು, ಸಂಧಾನ ಪ್ರಯತ್ನಗಳನ್ನು ನಡೆಸಲು, ಸಾವಿರಾರು ಜನರನ್ನು ಉದ್ದೇಶಿಸಿ ಬಹಿರಂಗವಾಗಿ ಭಾಷಣ ಮಾಡಲು ಅವಕಾಶ ನೀಡಿರುವುದು- ಇದು ಅಪ್ರಾಪ್ತ ಮಕ್ಕಳನ್ನು ಲೈಂಗಿಕ ಅಪರಾಧಗಳಿಂದ ರಕ್ಷಿಸಲು ಇರುವ ಪೋಕ್ಸೋದಂತಹ ಗಂಭೀರ ಕಾಯ್ದೆಯ ಮಹತ್ವವನ್ನೇ ನಾಶ ಮಾಡುತ್ತಿರುವುದು ಅಸಹನೀಯ. ಈ ಎಲ್ಲ ಪೋಕ್ಸೋ ಕಾಯ್ದೆ ಅನುಷ್ಠಾನ ಲೋಪಗಳು ಹಾಗೂ ಆರೋಪಿಗಳಿಗೆ ಬೆಂಬಲವಾದ ಸರ್ಕಾರಿ ವ್ಯವಸ್ಥೆಯ ನಡೆಗಳು ಖಂಡನೀಯ. ಹೀಗಾಗಿ ಆರೋಪಿಗಳು ಪ್ರತಿಷ್ಠಿತರೂ, ಪ್ರಭಾವಶಾಲಿಗಳು ಆಗಿರುವುದರಿಂದ ಹಾಗೂ ಸಂತ್ರಸ್ತ ಬಾಲಕಿಯರು ಈಗಾಗಲೇ ತಿಳಿಸಿರುವಂತೆ ಮಠದ ವಸತಿ ನಿಲಯದ ಇನ್ನಷ್ಟು ಹೆಣ್ಣುಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಈಡಾಗಿರುವ ಸಾಧ್ಯತೆ ಇರುವುದರಿಂದ ತಕ್ಷಣವೇ ರಾಜ್ಯ ಉಚ್ಚ ನ್ಯಾಯಾಲಯ ಮಧ್ಯ ಪ್ರವೇಶಿಸಿ, ಈ ಪ್ರಕರಣದ ತನಿಖೆಯನ್ನು ಹೊರ ರಾಜ್ಯದಲ್ಲಿ ನಡೆಸಲು ತಕ್ಷಣವೇ ಆದೇಶ ನೀಡಬೇಕು.
-ರೂಪ ಹಾಸನ, ಲೇಖಕಿ.
ರಾಜ್ಯ ಸರ್ಕಾರಕ್ಕೆ ಕಪಾಳ ಮೋಕ್ಷ!
ರಾಜ್ಯ ಸರ್ಕಾರದ ವರ್ಗಾವಣೆ ನೀತಿಯ ಬಗ್ಗೆ ಕಿಡಿಕಾರಿರುವ ರಾಜ್ಯ ಹೈಕೋರ್ಟ್, ಪರ್ಯಾ ಯವಾಗಿ ಸ್ಥಳ ನಿಯೋಜನೆ ಮಾಡದೇ ವರ್ಗಾವಣೆ ಮಾಡುವುದನ್ನು ನಿಷೇಧಿಸಿರುವುದು ಸ್ವಾಗತಾರ್ಹ. ರಾಜ್ಯ ಸರ್ಕಾರಕ್ಕೆ ಇದೊಂದು ಕಪಾಳ ಮೋಕ್ಷವೂ ಹೌದು. ಮನಸೋ ಇಚ್ಛೆ ವರ್ಗಾವಣೆ ಮಾಡಲು ಇನ್ನು ಮುಂದೆ ಸಾಧ್ಯವಿಲ್ಲ ದಂತಾಗಿದೆ. ಬಹುತೇಕ ಇಲಾಖೆಗಳಲ್ಲಿ ವರ್ಗಾವಣೆ ಒಂದು ದಂಧೆಯಾಗಿ ಪರಿಣಮಿಸಿದೆ. ಒಂದೊಂದು ಹುದ್ದೆಯ ವರ್ಗಾವಣೆಗೂ ಇಂತಿಷ್ಟು ಹಣ ಎಂದು ನಿಗದಿ ಪಡಿಸಲಾಗಿದೆ. ತಮಗೆ ಬೇಕಾದ ಸ್ಥಳಗಳಿಗೆ ವರ್ಗಾವಣೆ ಬಯಸುವ ಅಥವಾ ತಾವಿರುವ ಸ್ಥಳಗಳಿಂದ ಬೇರೆ ಸ್ಥಳಗಳಿಗೆ ಆಗುವ ವರ್ಗಾವಣೆಯನ್ನು ತಡೆಯಲು ಸರ್ಕಾರಿ ನೌಕರರು ನಾನಾ ರೀತಿಯ ಸರ್ಕಸ್ ಮಾಡುತ್ತಾರೆ. ಜನ ಪ್ರತಿನಿಧಿಗಳಿಂದ ಹಿಡಿದು ಮುಖ್ಯಮಂತ್ರಿಗಳವರೆಗೆ ಪ್ರಭಾವ ತರುತ್ತಾರೆ. ಲಕ್ಷಾಂತರ ರೂಪಾಯಿಗಳನ್ನು ಲಂಚದ ರೂಪದಲ್ಲಿ ಚೆಲ್ಲಲಾಗುತ್ತದೆ. ಅನೇಕ ಹಿರಿಯ ಅಧಿಕಾರಿಗಳನ್ನು ರಾತ್ರಿ ಬೆಳಗಾಗುವುದ ರೊಳಗೆ ರಾಜಕೀಯ ಪ್ರಭಾವಕ್ಕೆ ಮಣಿದು ವರ್ಗಾವಣೆ ಮಾಡಲಾಗುತ್ತದೆ. ಅಂತಹವರಿಗೆ ಯಾವುದೇ ಸ್ಥಳ ತೋರಿಸದೇ ತ್ರಿಶಂಕು ಪರಿಸ್ಥಿತಿ ನಿರ್ಮಾಣ ಮಾಡಲಾಗುತ್ತದೆ. ಇದರಿಂದ ರೋಸಿ ಹೋದ ಅದೆಷ್ಟೋ ಅಧಿಕಾರಿಗಳು ಕೆಎಟಿಗೆ ಮೊರೆಹೋಗಿ ಸರ್ಕಾರದ ವರ್ಗಾವಣೆಗೆ ತಡೆ ತಂದಿದ್ದಾರೆ. ರಾಜ್ಯ ಸರ್ಕಾರ ಇನ್ನು ಮುಂದಾದರೂ ಎಚ್ಚೆತ್ತುಕೊಂಡು, ತನ್ನ ವರ್ಗಾವಣೆ ನೀತಿಯನ್ನು ಪರಿಷ್ಕರಿಸಿ, ರಾಜ್ಯ ಹೈಕೋರ್ಟಿನ ಮಾರ್ಗದರ್ಶಿ ಸೂತ್ರಗಳನ್ನು ಪಾಲಿಸಬೇಕಾಗಿದೆ.
-ಕೆ.ವಿ.ವಾಸು, ವಿವೇಕಾನಂದನಗರ, ಮೈಸೂರು.
-ಕೆ.ವಿ.ವಾಸು, ವಿವೇಕಾನಂದನಗರ, ಮೈಸೂರು.