Mysore
24
broken clouds

Social Media

ಬುಧವಾರ, 30 ಏಪ್ರಿಲ 2025
Light
Dark

ಆಂದೋಲನ ಓದುಗರ ಪತ್ರ : 12 ಶುಕ್ರವಾರ 2022

ಬಿ (ಪ್ರ) ಹಾರ

ಆಡುವವರ ಬಾಯಿಗೆ ಆಹಾರ

ನಿ.ಕುಮಾರರ ಕೊರಳಿಗೆ ’ಹಾರ’

ಬಿಹಾರ ರಾಜಕಾರಣವೀ ವಿಹಾರ

ಯಾರಿಂದ ಯಾರಿಗೋ ಪ್ರಹಾರ!?

ಕಾದು ನೋಡಬೇಕು
ನೂತನ ಸರ್ಕಾರ

ಹೇಗೆ ಮಾಡುವುದೋ ಝೇಂಕಾರ !!

-ಮ ಗು ಬಸವಣ್ಣ, ಜೆಎಸ್‌ಎಸ್ ಸಂಸ್ಥೆ, ಸುತ್ತೂರು.


ನಿರುದ್ಯೋಗ ಪ್ರಮಾಣ ಭಾರಿ ಏರಿಕೆ!

ದೇಶದಲ್ಲಿ ನಿರುದ್ಯೋಗ ತೀವ್ರಗತಿಯಲ್ಲಿ ಏರುತ್ತಿರುವುದು ಆತಂಕದ ಸಂಗತಿ. ಇದೀಗ ನಿರುದ್ಯೋಗ ಪ್ರಮಾಣ ಸುಮಾರು ಶೇ.೧೦ಕ್ಕೆ ಮುಟ್ಟಿ ದಾಖಲೆಯಾಗಿದೆ.. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಸಂಸ್ಥೆಯ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಆಗಸ್ಟ್ ೭ಕ್ಕೆ ಕೊನೆಗೊಂಡ ವಾರದಲ್ಲಿ ದೇಶದಲ್ಲಿ ನಿರುದ್ಯೋಗ ಪ್ರಮಾಣ ಶೇ.೯.೬೬ ಕ್ಕೆ ಜಿಗಿದಿದೆ. ಹಿಂದಿನ ವಾರದಲ್ಲಿ ಇದು ಶೇ.೬.೭೩ರಷ್ಟಾಗಿತ್ತು. ಹಳ್ಳಿಗಳಲ್ಲಿ ನಿರುದ್ಯೋಗ ಪ್ರಮಾಣ ಶೇ.೫.೯೭ ರಿಂದ ೯.೮೮ ಕ್ಕೇರಿದೆ. ನಗರದಲ್ಲಿ ನಿರುದ್ಯೋಗ ಶೇ.೯ಕ್ಕಿಂತ ಹೆಚ್ಚಿದೆ. ಜುಲೈ ೩೧ಕ್ಕೆ ಕೊನೆಗೊಂಡ ವಾರದಲ್ಲಿ ಈ ಪ್ರಮಾಣ ಶೇ.೮.೩೧ರಷ್ಟಾಗಿತ್ತು. ನಿರುದ್ಯೋಗ ಹೀಗೆ ತೀವ್ರವಾಗಿ ಏರುವುದನ್ನು ತಡೆಯಲು ಕೇಂದ್ರ ಸರ್ಕಾರ ಬರೀ ಪ್ರಚಾರದಲ್ಲಿ ತೊಡಗುವ ಬದಲು ಉದ್ಯೋಗ ಸೃಷ್ಟಿಸುವ ರಚನಾತ್ಮಕ ಯೋಜನೆಗಳನ್ನು ರೂಪಿಸಬೇಕಿದೆ.

-ಟಿಶ ಜೈನ್, ಮಹಾರಾಜ ಕಾಲೇಜು, ಮೈಸೂರು.


ಆತ್ಮ ನಿರ್ಭರ ಬರೀ ಪ್ರಚಾರ!

ಆತ್ಮ ನಿರ್ಭರ ಭಾರತ ಯೋಜನೆಯು ಭಾರತೀಯ ಜನತೆ ಸ್ವಾವಲಂಬಿಗಳಾಗಿ ರೂಪಿಸುವ ಮಹತ್ವದ ಯೋಜನೆಯಾಗಿದೆ. ಆದರೆ ಇದು ಕೇಂದ್ರ ಸರ್ಕಾರ ಬರೀ ಪ್ರಚಾರಕ್ಕೆ ಮಾಡಿಕೊಂಡಿರುವ ಯೋಜನೆಯಂತಿದೆ. ನಮ್ಮ ದೇಶದ ಉತ್ಪಾದನೆ ಹೆಚ್ಚಾಗಿ ರಫ್ತು ಹೆಚ್ಚಾಗಬೇಕಿತ್ತು. ಆದರೆ, ದೇಶದ ರಫ್ತಿಗಿಂತಲೂ ಆಮದು ಪ್ರಮಾಣ ಹೆಚ್ಚುತ್ತಲೇ ಇರುವುದು ಕಳವಳಕಾರಿ ಸಂಗತಿ. ಕೇಂದ್ರ ವಾಣಿಜ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರವೇ, ಪ್ರಸ್ತುತ ವರ್ಷ ೬೬.೨೬ ಬಿಲಿಯನ್ ಡಾಲರ್ ಮೌಲ್ಯದ ಅಮದು ಮಾಡಿಕೊಳ್ಳಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ. ೪೩.೫೯ರಷ್ಟು ಹೆಚ್ಚು. ದೇಶೀಯ ಉತ್ಪಾದನೆಗೆ ಹೆಚ್ಚು ಒತ್ತು ನೀಡಿ, ರಫ್ತಿಗೆ ಪ್ರೋತ್ಸಾಹ ನೀಡಿದರೆ ಮಾತ್ರ ಭಾರತ ಆಮದು ಪ್ರಮಾಣ ತಗ್ಗಲು ಸಾಧ್ಯ. ಆಗ ಮಾತ್ರವೇ ಆತ್ಮನಿರ್ಭರ ಯೋಜನೆಗೆ ಅರ್ಥ ಬರುತ್ತದೆ. ಇಲ್ಲದಿದ್ದರೆ ಬರೀ ಪ್ರಚಾರವಾಗಿಯೇ ಉಳಿಯುತ್ತದೆ.

-ಚಂದ್ರ ಎ. ಮಹಾರಾಜ ಕಾಲೇಜು, ಮೈಸೂರು.


ಗದ್ದೆಗಳಾದ ರಸ್ತೆಗಳು!

ಎಚ್.ಡಿ.ಕೋಟೆ ತಾಲೋಕು, ಕಲ್ಲಂಬಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುವ ನಂಜೀಪುರ, ದಡದಹಳ್ಳಿ, ಕಟ್ಟೆಹುಣಸೂರು ಈ ಗ್ರಾಮಗಳು ಚಿಕ್ಕದೇವಮ್ಮನವರ ಬೆಟ್ಟದ ಸನಿಹದ ಗ್ರಾಮಗಳಾಗಿದ್ದು, ಈ ಗ್ರಾಮಗಳ ಮುಖ್ಯ ರಸ್ತೆಗಳು ಮುಳ್ಳೂರು, ಹುಲ್ಲಹಳ್ಳಿ ಮುಖ್ಯ ರಸ್ತೆ ಸಂಪೂರ್ಣವಾಗಿ ಹಾಳಾಗಿವೆ. ಮಳೆಗಾಲದ ಸಂದರ್ಭದಲ್ಲಿ ಈ ರಸ್ತೆಗಳೇ ಗದ್ದೆಗಳಾಗಿಬಿಟ್ಟಿವೆ, ಜನರು ಈ ಮಾರ್ಗದ ರಸ್ತೆಗಳಲ್ಲಿ ಸಂಚರಿಸುವುದು ತುಂಬಾ ಕಷ್ಟವಾಗಿದೆ. ರಸ್ತೆಗಳ ಈ ಸ್ಥಿತಿಯಿಂದಾಗಿ ಈ ಮಾರ್ಗದಲ್ಲಿ ಬಸ್ಸುಗಳು ಸಹ ಸಂಚರಿಸುತ್ತಿಲ್ಲ . ಹೀಗಾಗಿ ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡುವುದೇ ಕಷ್ಟಕರವಾಗಿದೆ. ಅತಿಯಾದ ಮಳೆಯಿಂದಾಗಿ ಈ ಭಾಗದ ಎಲ್ಲ ನದಿಗಳ ಸೇತುವೆಗಳು ಮುಳುಗಡೆಯಾಗಿದ್ದು, ಒಂದು ಊರಿಗೂ ಮತ್ತೊಂದು ಊರಿಗೂ ಸಂಪರ್ಕವೇ ಇಲ್ಲದಂತಾಗಿದೆ. ಇದರಿಂದಾಗಿ ಜನರ ಬದುಕು ತುಂಬಾ ದುಸ್ತರವಾಗಿದೆ, ಜನರು ಅನಾರೋಗ್ಯಕ್ಕಿಡಾದರೆ ಆಸ್ಪತ್ರೆಗಳಿಗೆ ಹೋಗಲೂ ಸಹ ಸಾಧ್ಯವಾಗದೇ ಕೆಲವು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ, ಗರ್ಭೀಣಿಯರನ್ನು ಸಕಾಲಕ್ಕೆ ಆಸ್ಪತ್ರೆಗಳಿಗೆ ತಲುಪಿಸಲು ಆಂಬುಲೆನ್ಸ್ ನ ಸೌಲಭ್ಯವೂ ಸಿಗುತ್ತಿಲ್ಲ. ತಕ್ಷಣವೇ ರಸ್ತೆ ದುರಸ್ತಿ ಮಾಡಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸಿ.

-ಪ್ರಸನ್ನಕುಮಾರ್, ಮೈಸೂರು.


ಕುವೆಂಪು ಗ್ರಂಥಾಲಯದ ಅವ್ಯವಸ್ಥೆ

ಮೈಸೂರು ನಗರದ ವಿಶ್ವ ಮಾನವ ಜೋಡಿ ರಸ್ತೆಯ ಸಿದ್ದಗಂಗಾಶ್ರೀಗಳ ವೃತ್ತದ ಬಳಿ ಇರುವ ಕುವೆಂಪು ಜ್ಞಾನ ತಾಣ ಸೇವಾ ಕೇಂದ್ರದ ಗ್ರಂಥಾಲಯ ಅವ್ಯವಸ್ಥೆ ಇದೆ. ದೂರದಿಂದ ಹಾಗೂ ಹೊರಗಿನಿಂದ ಸುಂದರ ಹಾಗೂ ಆಕರ್ಷಕವಾಗಿ ಕಾಣುವ ಜ್ಞಾನ ತಾಣದ ಗ್ರಂಥಾಲಯ, ಒಳಹೊಕ್ಕರೆ, ಅಲ್ಲಿನ ಅವ್ಯವಸ್ಥೆ ಬೇಸರ ಉಂಟು ಮಾಡುತ್ತದೆ. ಗ್ರಂಥಾಲಯದೊಳಗಿರುವ ಪುಸ್ತಕ, ಪತ್ರಿಕೆ ಹಾಗೂ ಪೀಠೋಪಕರಣ ಮೊದಲಾದ ವಸ್ತುಗಳಿಗೆ ಅಭದ್ರತೆ ಕಾಡುತ್ತಿದೆ. ಮಳೆ, ಚಳಿ ಮತ್ತು ಗಾಳಿ ಬಡಿತದಿಂದ ಕಟ್ಟಡ ಹಾಗೂ ಪುಸ್ತಕಗಳಿಗೆ ಹಾನಿಯಾಗುತ್ತಿದೆ.

ಸಮರ್ಪಕ ಬೆಳಕಿನ ಕೊರತೆ ಹಾಗೂ ವಿದ್ಯುತ್ ಸಮಸ್ಯೆಯಿಂದ ಸಂಜೆ ನಂತರ ಮಬ್ಬುಕವಿದ ವಾತಾವರಣದಲ್ಲಿ ಪತ್ರಿಕೆ ಗಳನ್ನು ಓದಬೇಕಾದ ಸ್ಥಿತಿ ಇದೆ. ಗ್ರಂಥಾಲಯ ಕಟ್ಟಡದ ಮೇಲುಭಾಗದಲ್ಲಿರುವ ಮಂಟಪದಲ್ಲಿ ವಿಶ್ವ ಮಾನವ ಕುವೆಂಪು ಅವರ ಪ್ರತಿಮೆಯೂ ನಿರ್ಲಕ್ಷ್ಯಕ್ಕೊಳಗಾಗಿದೆ. ಪ್ರತಿಮೆ ಮೇಲೆ ಪಕ್ಷಿಗಳು ಕುಳಿತು ಪಿಕ್ಕೆ ಹಾಕಿ ಹೋಗುವುದರಿಂದ, ಪ್ರತಿಮೆಯ ಸೌಂದರ್ಯಕ್ಕೆ ಧಕ್ಕೆ ಉಂಟಾಗಿದೆ. ಕುವೆಂಪು ಅವರ ಹುಟ್ಟು ಹಬ್ಬದ ದಿನದಂದು ಮಾತ್ರ ಶುದ್ಧಿಯಾಗುವ ಪ್ರತಿಮೆ, ನಂತರ ವರ್ಷವಿಡೀ ಯಾರಿಗೂ ಬೇಡವಾಗಿರುತ್ತದೆ. ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ .

-ರವಿ, ಕುವೆಂಪು ನಗರ, ಮೈಸೂರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ