Light
Dark

ಆಂದೋಲನ ಓದುಗರ ಪತ್ರಗಳು : 08 ಸೋಮವಾರ 2022

ಸ್ಛೋಟ

ಇದು ನಾನಾ ಬಗೆಯ ಸ್ಛೋಟಕಗಳ ಕಾಲ: ಮೇಘಸ್ಫೋಟ:
ಜಲಸ್ಛೋಟ; ಬಾಂಬುಸ್ಛೋಟ (ಎಲ್ಲಕ್ಕಿಂತ ಮಿಗಿಲು ); ಘಟಸ್ಛೋಟ
(ವಿವಾಹ ವಿಚ್ಛೇದನ) ಇತ್ಯಾದಿ.
ಬಾಹ್ಯ ಜಗತ್ತಿನಲ್ಲಿ, ಕಾವ್ಯ ಜಗತ್ತನ್ನು ನೋಡೋಣ. ‘ಧ್ವನಿ’
ಕಾವ್ಯದ ಜೀವಾಳ ಎನ್ನಲಾಗಿದೆ. ಧ್ವನಿ ತತ್ತ್ವಕ್ಕೆ ಪ್ರೇರಣೆ ವ್ಯಾಕರಣದ
ಸ್ಛೋಟಕತ್ವ, ಎನ್ನುತ್ತಾರೆ, ವಿದ್ವಾಂಸರು.
ಬದುಕಿನಲ್ಲಿ ಬೇಡ ಸ್ಛೋಟ; ಕಾವ್ಯಕ್ಕೆ ಸೀಮಿತವಾಗಿರಲಿ !
– ಸಿಪಿಕೆ, ಮೈಸೂರು.


ಪರಿಸರ ಸಮತೋಲನ ಕಾಪಾಡುವುದು ಮುಖ್ಯ

ಮನುಷ್ಯ, ಬೆಟ್ಟದ ತುದಿಗಳನ್ನು ಸವರಿ, ಭೂತಾಯಿಯ ಒಡಲನ್ನು ಅಗೆದು, ಬಗೆದು, ಕೆರೆ-ಕಟ್ಟೆಗಳನ್ನು ರಾಜಕಾಲುವೆಗಳನ್ನು ಸಮಾಧಿ ಮಾಡಿ ಅವುಗಳ ಮೇಲೆ ಮನೆಗಳು, ವಾಣಿಜ್ಯ ಕಟ್ಟಡಗಳು ಐಷಾರಾಮಿ ಹೋಟೆಲ್‌ಗಳನ್ನು ಕಟ್ಟಿಕೊಂಡರೆ ಮಳೆ ನೀರು ಇನ್ನೆಲ್ಲಿ ಹೋಗುತ್ತದೆ?! ಆದ್ದರಿಂದಲೇ, ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ನೆರೆ ಬಂದು ಜನರ ಬದುಕು ನೀರು ಪಾಲಾಗುತ್ತಿರುವುದು. ಹಾಗೂ ಈ ರೀತಿಯ ಪ್ರವಾಹ, ಭೂಕುಸಿತ ಇನ್ನಿತರ ಪ್ರಾಕೃತಿಕ ವಿಕೋಪದ ಸಮಸ್ಯೆಗಳು ಆಗಾಗ ನಮ್ಮನ್ನು ಕಾಡುತ್ತಲೇ ಇರುವುದು.
ಮಹಾ ಮಳೆ, ಮಳೆಯ ರೌದ್ರ ನರ್ತನ ಹಾಗೆ ಹೀಗೆ ಎಂದು ಬಡಬಡಿಸುವ ನಾವು, ಬೇಸಿಗೆಯಲ್ಲಿ ಹನಿ ನೀರಿಗೂ ಪರದಾಡುವುದನ್ನು ಮರೆತಿದ್ದೇವೆ. ಮಳೆ ಬಂದರೆ ಅದು ಭೂಮಿಯಲ್ಲಿ ಇಂಗುವಂತೆ ಮಾಡಿ, ಕೆರೆ-ಕಟ್ಟೆ, ಕಾಲುವೆ-ಬಾವಿಗಳಲ್ಲಿ ಕಾಲಕಾಲಕ್ಕೆ ಹೂಳೆತ್ತಿಸಿ ಮಳೆ ನೀರನ್ನು ಶೇಖರಣೆ ಮಾಡುವ, ಪರಿಸರವನ್ನು ಸಮತೋಲನದಲ್ಲಿಡುವ ಕಾರ್ಯಕ್ರಮಗಳನ್ನು ರೂಪಿಸಿದರೆ ಈ ರೀತಿಯ ಅವಘಡಗಳು ತಪ್ಪುತ್ತವೆ.
ಸಾವು ನೋವುಗಳು ಘಟಿಸಿದ ಮೇಲೆ ಸಾವಿರಾರು ಕೋಟಿ ರೂ. ಪರಿಹಾರ ಬಿಡುಗಡೆ ಮಾಡುವ ಬದಲು, ಅದೇ ಹಣದಲ್ಲಿ ಹೆಚ್ಚು ಹಾನಿಯಾಗುವ ಪ್ರದೇಶಗಳನ್ನು, ಕಟ್ಟಡಗಳನ್ನು ಮೊದಲೇ ಗುರುತಿಸಿ ಅಲ್ಲಿರುವವರನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಿ ಆ ಪ್ರದೇಶಗಳಲ್ಲಿ ಕೆರೆ-ಕಟ್ಟೆ ನಿರ್ಮಿಸುವತ್ತ ಸರ್ಕಾರ ಯೋಜನೆ ರೂಪಿಸಬೇಕು.
-ಬಿ.ಗಣೇಶ, ಕೆ.ಜಿ.ಕೊಪ್ಪಲು,ಮೈಸೂರು.


ಮನೆಯೇ ಇಲ್ಲದವರು ಧ್ವಜ ಹಾರಿಸುವುದೆಲ್ಲಿ?

ದೇಶವು ಸ್ವಾತಂತ್ರ್ಯ ಗಳಿಸಿದ ಅಮೃತ ಮಹೋತ್ಸವದ ಹೊಸ್ತಿಲಲ್ಲಿದೆ. ಲಕ್ಷಾಂತರ ಜನರ ವಿರೋಚಿತ ಹೋರಾಟದ ಫಲವಾಗಿ ಬ್ರಿಟಿಷ್ ವಸಾಹತುಶಾಹಿಯಿಂದ ವಿಮೋಚನೆಗೊಂಡು ಸ್ವತಂತ್ರ ರಾಷ್ಟ್ರದ ಅಸ್ತಿತ್ವ ಪಡೆದಿದ್ದೇವೆ. ಸ್ವಾತಂತ್ರ್ಯ ಗಳಿಸಿದ ೭೫ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಆ ಮೂಲಕ ಜನರು ರಾಷ್ಟ್ರಭಕ್ತಿಯನ್ನು ಪ್ರದರ್ಶನ ಮಾಡಬೇಕೆಂದು ಮನವಿ ಮಾಡಿದ್ದಾರೆ. ಅದಕ್ಕಾಗಿ ತ್ರಿವರ್ಣ ಧ್ವಜಗಳನ್ನು ಮಾರಲು ರಾಜ್ಯ ಬಿಜೆಪಿ ಸರ್ಕಾರ ಮುಂದಾಗಿದೆ.

ಆದರೆ ಸ್ವಾತಂತ್ರ್ಯ ಬಂದು ೭೫ ವರ್ಷಗಳಾದರೂ ವಾಸಿಸಲು ಕನಿಷ್ಠ ಮನೆ ಇಲ್ಲದವರು ಏನು ಮಾಡಬೇಕು? ಅವರು ಎಲ್ಲಿ ತ್ರಿವರ್ಣ ಧ್ವಜ ಹಾರಿಸಬೇಕು ಎಂಬ ಪ್ರಶ್ನೆ ಎದ್ದಿದೆ. ಪ್ರಧಾನ ಮಂತ್ರಿ ಆವಾಸ್ ೋಂಜನೆ ನಡೆದ ವಸತಿರಹಿತರ ಸಮೀಕ್ಷೆಯಲ್ಲಿ ಕರ್ನಾಟಕದಲ್ಲಿ ೩೯.೨೧ ಲಕ್ಷ ಜನರಿಗೆ ವಾಸಿಸಲು ಸೂರಿಲ್ಲ. ೨೧.೭೮ ಲಕ್ಷ ಗ್ರಾಮೀಣ ಭಾಗದ ಜನರು ವಸತಿ ವಂಚಿತರಾದರೆ, ೧೮.೧೭ ಲಕ್ಷ ಜನರು ನಗರ ಭಾಗಗಳಲ್ಲಿ ಸೂರು ವಂಚಿತರಾಗಿದ್ದಾರೆ. ಬಹುಶಃ ಈ ಲೆಕ್ಕಾಚಾರ ಗೊತ್ತಿದ್ದರೆ ಪ್ರಧಾನಿಯವರು ಪ್ರತಿೊಂಬ್ಬರೂ ಮನೆಯ ಮೇಲೆ ತಿರಂಗ ಹಾರಿಸಲು ಕರೆ ನೀಡುತ್ತಿರಲಿಲ್ಲ ಅನಿಸುತ್ತದೆ.
-ಮದನ್ ಹಾದನೂರು, ಎಚ್.ಡಿ.ಕೋಟೆ ತಾ.


‘ಪ್ರೊಫೈಲ್‌ನಲ್ಲಿ ರಾಷ್ಟ್ರಧ್ವಜ ಫೋಟೊ ಹಾಕಿಕೊಳ್ಳೋಣ’

ದೇಶದ ೭೫ನೇ ಸ್ವಾತಂತ್ರ್ಯವನ್ನು ಸಂಭ್ರಮ ಸಡಗರದಿಂದ ಆಚರಿಸಲು ಕೇಂದ್ರ ಸರ್ಕಾರ ಕರೆ ನೀಡಿದೆ. ಈ ಅಭಿಯಾನದ ಅಂಗವಾಗಿ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿರುವ ತಮ್ಮ ತಮ್ಮ ಖಾತೆಗಳ ಪ್ರೊಫೈಲ್‌ನಲ್ಲಿ ರಾಷ್ಟ್ರಧ್ವಜ ಫೋಟೋ ಹಾಕುವ ಮುಖಾಂತರ ನಾವೆಲ್ಲರೂ ಗೌರವವನ್ನು ಸಲ್ಲಿಸೋಣ ಎಂದು ಮೋದಿ ಅವರೇ ಕರೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಭರ್ಜರಿ ತಯಾರಿಗಳನ್ನು ನಡೆಸಲಾಗುತ್ತಿದೆ.
ಇದಕ್ಕೆ ಪೂರಕವಾಗಿ ಹರ್ ಘರ್ ತಿರಂಗ (ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ)ವನ್ನು ಆ.೧೩ ರಿಂದ ೧೫ ರವರೆಗೆ ರಾಷ್ಟ್ರಧ್ವಜವನ್ನು ಹಾರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ಇಷ್ಟೇ ಅಲ್ಲದೆ, ದೇಶದ ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಗಾಂಧೀಜಿ, ಸುಭಾಷ್ ಚಂದ್ರ ಬೋಸ್, ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಒನಕೆ ಓಬವ್ವ ಇನ್ನೂ ಅನೇಕರ ಭಾವಚಿತ್ರಗಳ ಮೆರವಣಿಗೆ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸುವುದು ಉತ್ತಮ ಕಾರ್ಯವಾಗಿದೆ. ದೇಶದಾದ್ಯಂತ ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಹಬ್ಬದ ರೀತಿಯಲ್ಲಿ ಆಚರಿಸುತ್ತಿರುವುದು ದೇಶಭಕ್ತಿಗೆ ಹಿಡಿದ ಕನ್ನಡಿಯಾಗಿದೆ.
-ಎನ್.ಪಿ.ಪರಶಿವಮೂರ್ತಿ, ಶಿಕ್ಷಕರು, ನಂಜೀಪುರ, ಸರಗೂರು ತಾಲ್ಲೂಕು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ