Light
Dark

ಆಂದೋಲನ ಓದುಗರ ಪತ್ರ : 30 ಶನಿವಾರ 2022

ಬಯಲಾಗುತ್ತಿದೆ ಬೂಟಾಟಿಕೆಯ ಹಿಂದುತ್ವ!?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಬಿಜೆಪಿ ಮುಖಂಡನ ಹತ್ಯೆಯನ್ನು ಮಾಮೂಲಿಯಂತೆ ಪಕ್ಷದ ವರ್ಚಸ್ಸಿಗೆ ಬಳಸಿಕೊಂಡು ಮುಂದಿನ ಚುನಾವಣೆಯಲ್ಲಿ ಮತದಾರರ ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸುವ ಬಿಜೆಪಿಗರ ಬೂಟಾಟಿಕೆಯ ಹಿಂದುತ್ವದ ಮುಖವಾಡ ಕಳಚಿದೆ. ಇವರ ಮೊಸಳೆ ಕಣ್ಣೀರನ್ನು ಅರಿತ ಸ್ಥಳೀಯರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ನಳೀನ್ ಕುರ್ಮಾ ಕಟೀಲ್, ಆರ್‌ಎಸ್‌ಎಸ್ ಸಂಚಾಲಕರಾದ ಕಲ್ಲಡ್ಕ ಪ್ರಭಾಕರ ಭಟ್ ಮತ್ತು ಇಂಧನ ಸಚಿವ ಸುನಿಲ್ ಕುಮಾರ್‌ಗೆ ಸರಿಯಾಗೇ ಪಾಠ ಕಲಿಸಿದ್ದಾರೆ. ರಾಜಕಾರಣಿಗಳ ಬೂಟಾಟಿಕೆಯನ್ನು ಅರಿತು ಪ್ರಶ್ನಿಸುವ ಪ್ರವೃತ್ತಿ ಎಲ್ಲರಲ್ಲೂ ಮೂಡಬೇಕಿದೆ. ಕೇಂದ್ರ ರಾಜ್ಯಗಳೆರಡರಲ್ಲೂ ತಮ್ಮದೇ ಸರ್ಕಾರವಿದ್ದರೂ ಹಿಂದೂಗಳಿಗೆ ದೇಶದಲ್ಲಿ ರಕ್ಷಣೆಯಿಲ್ಲ, ಕಾರ್ಯಕರ್ತರ ಕಗ್ಗೊಲೆಗಳು ನಿರಂತರವಾಗಿ ನಡೆಯುತ್ತಿವೆಯೆಂಬ ಬಿಜೆಪಿಗರ ಕಂಠಪಾಠದ ಮಾತುಗಳು ಪೊಳ್ಳೆಂಬುದನ್ನು ಜನ ಅರ್ಥಮಾಡಿಕೊಂಡಿದ್ದಾರೆ. ಅದರಲ್ಲೂ ಸಂಸದ ತೇಜಸ್ವಿ ಸೂರ್ಯ ರಕ್ಷಣೆಯ ಬಗ್ಗೆ ಆಡಿರುವ ಮಾತುಗಳು ರಾಜಕಾರಣಿಗಳ ಒಳಸಂಚನ್ನು ತೋರುತ್ತಿವೆ. ತಮ ಜೀವಕ್ಕೆ ಅಪಾಯವಿದೆಯೆಂದು ಆರು ತಿಂಗಳ ಮೊದಲೇ ಮಾಹಿತಿ ಪಡೆದು ಸೆಕ್ಯುರಿಟಿ ಪಡೆದುಕೊಳ್ಳುವವರು ಸಾಮಾನ್ಯನ ರಕ್ಷಣೆ ಬಗ್ಗೆ ಹಗುರವಾಗಿ ಮಾತಾಡುವುದನ್ನು ಅವರನ್ನು ಹಿಂಬಾಲಿಸಿ ಧರ್ಮದ, ಪಕ್ಷದ ಹೆಸರಲ್ಲಿ ಕಿತ್ತಾಡುವವರು ಗಮನಿಸಬೇಕಾಗಿದೆ. ಪ್ರತಿಯೊಬ್ಬರಿಗೂ ಸೆಕ್ಯುರಿಟಿ ಕೊಡಲು ಸಾಧ್ಯವೇ ಎಂದು ಪ್ರಶ್ನಿಸುವ ಸಂಸದರು ಮತ್ತು ಸಂಘಟನೆಗಳ ಮುಖಂಡರು ಜಾತಿ- ಧರ್ಮದ ಹೆಸರಲ್ಲಿ ವಿಷ ಉಗುಳಿ ಕೆರಳಿಸುವುದನ್ನು ನಿಲ್ಲಿಸಿದರೆ ಅದೇ ದೊಡ್ಡ ರಕ್ಷಣೆಯಾಗುತ್ತದೆ.

– ಮಲ್ಲಿಕಾರ್ಜುನಪ್ಪ ಪಿ, ಮಹಾರಾಜ ಕಾಲೇಜು, ಮೈಸೂರು.


ರಾಜಕೀಯ ಎಂದರೆ ಇದೇ!

ಒಂದು ಕೋಮಿನ ಅಥವಾ ಒಂದು ಪಕ್ಷದ ವ್ಯಕ್ತಿ ಮತ್ತೊಂದು ಧರ್ಮದ ದುಷ್ಕರ್ಮಿಗಳಿಂದ ಹತ್ಯೆ ಆದಾಗ, ಆ ಪಕ್ಷದ ನಾಯಕರಿಗಳಿಂದ ಬರುವ ವೀರವೇಶದ ಮಾತುಗಳೆಂದರೆ, ನಾನು ಯಾವುದೇ ತ್ಯಾಗಕ್ಕಾದರೂ ಸಿದ್ಧ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲೂ ಸಿದ್ಧ ಎನ್ನುತ್ತಾರೆ. ಇವೆಲ್ಲವೂ ಕೇವಲ ತೋರಿಕೆಗಾಗಿ ಮಾತ್ರ. ರಾಜಕೀಯ ಎಂದರೆ ಇದೇ!

-ಬೂಕನಕೆರೆ ವಿಜೇಂದ್ರ, ಮೈಸೂರು.


ಚುನಾವಣೆ ಬರುತಿದೆ, ವಿನಾಯಿತಿಗಳೂ ಕೂಡಾ!

ಹಿರಿಯ ನಾಗರಿಕರಿಗೆ ರೈಲು ಪ್ರಯಾಣದಲ್ಲಿ ನೀಡುತ್ತಿರುವ ದರ ವಿನಾಯಿತಿ ಸ್ವಲ್ಪ ಮಾರ್ಪಾಡಿನೊಂದಿಗೆ ಬರುವ ಮಾಹಿತಿ ಬರುತ್ತಿದೆ. ಈ ವಿನಾಯಿತಿಯನ್ನು ಪಡೆಯಲು ವಯಸ್ಸಿನ ಮಿತಿಯನ್ನು ೬೦ರ ಬದಲು ೭೦ ಕ್ಕೇ ಏರಿಸಲಾಗುತ್ತಿದೆಯಂತೆ. ಕೋರೊನಾ- ಕೋವಿಡ್ ಸಮಯದಲ್ಲಿ ದಿಢೀರ್ ಎಂದು ವಾಪಸ್ಸು ಪಡೆದ ಈ ವಿನಾಯಿತಿ ಕ್ರಮೇಣ ಹಿಂತಿರುಗಿ ಬರಲು ಮುಂಬರುವ ಚುನಾವಣೆಗಳು ಕಾರಣ ಎನ್ನುವ ಟೀಕೆಯಲ್ಲಿ ಅರ್ಥವಿಲ್ಲದಿಲ್ಲ. ೨೦೨೩ರಲ್ಲಿ ಹಲವು ವಿಧಾನಸಭಾ ಚುನಾವಣೆಗಳು ಮತ್ತು ೨೦೨೪ರಲ್ಲಿ ಲೋಕಸಭಾ ಚುನಾವಣೆಯು ಇರುವುದು ಕಾಕತಾಳಿಯವೂ ಅಲ್ಲ ಮತ್ತು ಅಕಸ್ಮಿಕವೂ ಅಲ್ಲ. ಭಾರತದಲ್ಲಿ ಸರ್ಕಾರದ ಪ್ರತಿಯೊಂದು ನಿಲುವು ಮತ್ತು ನಡೆಯಲ್ಲಿ ಮತಬ್ಯಾಂಕ್ ರಾಜಕಾರಣ ಇರುತ್ತದೆ ಎನ್ನುವ ಲಾಗಾಯ್ತನಿಂದ ಬಂದ ಟೀಕೆಯಲ್ಲಿ ತೂಕವಿದೆ.

-ರಮಾನಂದ ಶರ್ಮಾ, ಬೆಂಗಳೂರು.ಕಾಂಗ್ರೆಸ್‌ಗೆ ಶಕ್ತಿ ನೀಡುತ್ತಾ ’ಸಿದ್ದರಾಮೋತ್ಸವ’?

ರಾಜ್ಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರಿಗೆ ಇದೆ ಆಗಸ್ಟ್ ೦೩ ರಂದು ೭೫ ವರ್ಷ ತುಂಬುತ್ತಿರುವ ಹಿನ್ನೆಲೆ ತಮ್ಮ ಜನ್ಮದಿನವನ್ನು ಸ್ನೇಹಿತರು ಮತ್ತು ಲಕ್ಷಾಂತರ ಅಭಿಮಾನಿಗಳ ಜೊತೆ ಆಚರಿಸಿಕೊಳ್ಳಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸಿದ್ದರಾಮಯ್ಯನವರು ಇದನ್ನು ೭೫ನೇ ‘ಅಮೃತ ಮಹೋತ್ಸವ’ ಎಂದರೆ, ಅಭಿಮಾನಿಗಳು ‘ಸಿದ್ದರಾಮೋತ್ಸವ’ ಎನ್ನುತ್ತಿದ್ದಾರೆ. ಈ ಅಭಿಮಾನದ ‘ಸಿದ್ದರಾಮೋತ್ಸ’ವದ ಬಗ್ಗೆ ಆಡಳಿತ ಬಿಜೆಪಿ ಪಕ್ಷದ ನಾಯಕರನ್ನೊಳಗೊಂಡಂತೆ ಸ್ವಪಕ್ಷಿಯರಿಂದಲೆ ವಿರೋಧದ ಮಾತುಗಳು ಕೇಳಿ ಬರುತ್ತಿವೆ. ಅಭಿಮಾನದ ‘ಸಿದ್ದರಾಮೋತ್ಸವ’ದ ಬಗ್ಗೆ ಏನೇ ಟೀಕೆ, ಟಿಪ್ಪಣಿ ಇದ್ದರೂ ಕೂಡ ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ‘ಮಾಸ್ ಲೀಡರ್’ ಎನ್ನುವುದು ಸುಳ್ಳಲ್ಲ. ೨೦೧೩ ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಮತ್ತು ಸಿದ್ದರಾಮಯ್ಯನವರು ಸಿಎಂ ಗಾದಿಗೇರಲು ಸ್ವತಃ ಸಿದ್ದರಾಮಯ್ಯನವರೆ ಕಟ್ಟಿದ್ದ ಅಂಹಿದ ಸಂಘಟನೆ ಸಹಕಾರಿಯಾಗಿತ್ತು ಎನ್ನುವುದು ಇತಿಹಾಸ. ಇತಿಹಾಸ ಮತ್ತೆ ಮರುಕಳುಹಿಸುತ್ತಾ? ಅಂಹಿದದಂತೆ ‘ಸಿದ್ದರಾಮೋತ್ಸವ’ ಕೂಡ ೨೦೨೩ಕ್ಕೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯಲು ಶಕ್ತಿ ನೀಡುತ್ತಾ? ಇಲ್ಲ ಬಣ ಬಡಿದಾಟಕ್ಕೆ ಕಾರಣವಾಗಿ ರಾಜ್ಯ ಕಾಂಗ್ರೆಸ್ ಛಿದ್ರವಾಗುತ್ತಾ? ಕಾದು ನೋಡೋಣ.

-ರಮೇಶ್ ಮೌರ್ಯ, ಹೆಡಿಯಾಲ, ನಂಜನಗೂಡು ತಾಲ್ಲೂಕು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ