Light
Dark

ಜಿಡಿಪಿ ಮೇಲೆ ಎಲ್ಲ ದಿಕ್ಕುಗಳಿಂದಲೂ ಪ್ರಹಾರ

-ಪ್ರೊ.ಆರ್.ಎಂ.ಚಿಂತಾಮಣಿ  

ಐದು ತಿಂಗಳಿಂದ ನಡೆಯುತ್ತಿರುವ ರಶಿಯಾ-ಉಕ್ರೇನ್ ಯುದ್ಧವನ್ನು ನಿಲ್ಲಿಸುವ ಯಾವ ಗಂಭೀರ ಪ್ರಯತ್ನಗಳೂ ನಡೆಯುತ್ತಿಲ್ಲ. ಆಮೇರಿಕ ಮತ್ತು ಯೂರೋಪಿನ ದೇಶಗಳು ರಶಿಯಾದ ಮೇಲೆ ನಿಷೇಧಗಳನ್ನು ಹೇರಿದವು. ಅದರಿಂದ ತಾವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿವೆ. ಈ ನಡುವೆ ಕೆಲಕಿದ ನೀರಿನಲ್ಲಿ ಲಾಭ ಮಾಡಿಕೊಳ್ಳುವ ಯತ್ನಗಳೂ ನಡೆದಿವೆ. ಅನಿಶ್ಚಿತತೆಯ ವಾತಾವರಣದಲ್ಲಿ ಜಾಗತಿಕ ಸರಕು ಪೂರೈಕೆ ಸರಪಳಿಯಲ್ಲಿ ದೊಡ್ಡ ಸಮಸ್ಯೆಗಳು ಉದ್ಭವಿಸಿವೆ. ಎಲ್ಲಾ ದೇಶಗಳಲ್ಲೂ ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆಗಳು ಕಾಡುತ್ತಿವೆ.

ಶ್ರೀಮಂತ ದೇಶಗಳಲ್ಲಿ ಹಿಂದಿನ ೪೧ ವರ್ಷಗಳಲ್ಲಿ ಕಾಣದಿದ್ದ ಮಟ್ಟಕ್ಕೆ ಬೆಲೆ ಏರಿಕೆ ಹೋಗಿದೆ. ಕಚ್ಚಾ ತೈಲ ಬೆಲೆ ಈಗ ಸ್ವಲ್ಪ ಇಳಿದಿದ್ದರೂ ನಾಳೆ ಏನಾಗಬಹುದೆಂದು ಹೇಳಲಿಕ್ಕಾಗದು. ಕೋವಿಡ್-೧೯ ಉಳಿದೆಲ್ಲ ದೇಶಗಳಲ್ಲಿ ನಿಯಂತ್ರಣಕ್ಕೆ ಬಂದಿದ್ದರೂ ಚೀನಾದಲ್ಲಿ ಇನ್ನೂ ತೊಂದರೆ ಕೊಡುತ್ತಿದೆ. ಅಲ್ಲದೆ ಮಂಗನ ಮೈಲಿಬೇನೆ (ಞಟ್ಞಛಿ ್ಛಟ್ಡ) ವಿಶ್ವದ ೭೦ ದೇಶಗಳಲ್ಲಿ ಮನುಷ್ಯರಲ್ಲಿ ಕಾಣಿಸಿಕೊಂಡಿದ್ದು, ಆರೋಗ್ಯ ತುರ್ತುಸ್ಥಿತಿ ಉಂಟಾಗಿದ್ದರಿಂದ ಎಲ್ಲ ದೇಶಗಳ ಸರ್ಕಾರಗಳು ಎಚ್ಚರಿಕೆಯ ಕ್ರಮಗಳನ್ನು ಕೈಕೊಳ್ಳಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ. ಶ್ರೀಲಂಕಾದಂತಹ ಕೆಲವು ಸಣ್ಣ ದೇಶಗಳು ತಮ್ಮದೇ ಕಾರಣಗಳಿಂದಾಗಿ ದಿವಾಳಿ ಅಂಚಿನಲ್ಲಿವೆ. ಇಂಥ ಹಲವು ಕಾರಣಗಳಿಂದ ಜಗತ್ತಿನ ಎಲ್ಲ ದೇಶಗಳ ಒಟ್ಟು ಒಟ್ಟಾದಾಯದ (ಎ್ಟಟ ಟಞಛಿಠಿಜ್ಚಿ ಟ್ಟಟಛ್ಠ್ಚಠಿ ಜಿಡಿಪಿ) ಬೆಳವಣಿಗೆಯ ಗತಿ ತೀವ್ರವಾಗಿ ಈ ವರ್ಷ ಕುಸಿಯುವ ಭಯವಿದೆ. ಜಾಗತಿಕ ಅರ್ಥ ವ್ಯವಸ್ಥೆ ಇನ್ನೊಂದು ಆರ್ಥಿಕ ಹಿಂಜರಿತದ ಆತಂಕದಲ್ಲಿದೆ, ಈ ಸಲ ಅದಕ್ಕೆ ಭೌಗೋಳಿಕ ರಾಜಕೀಯವೆ (ಎಜಿಟ ಟ್ಝಜಿಠಿಜ್ಚಿಚ್ಝ ಠ್ಟಿಛ್ಞಿ) ಕಾರಣವೆಂದು ಹೇಳದೆ ವಿಧಿಯಿಲ್ಲ.

ಭಾರತದ ಜಿ.ಡಿ.ಪಿ.ಗೆ ಕಂಟಕಗಳು

ಪ್ರವಾಸೋದ್ಯಮವೂ ಸೇರಿ ಎಲ್ಲ ಆರ್ಥಿಕ ಚಟುವಟಿಕೆಗಳೂ ಕೋವಿಡ್-೧೯ ಪರಿಣಾಮದಿಂದ ೨೦೨೧-೨೨ರಲ್ಲೇ ಪೂರ್ಣ ಪ್ರಮಾಣದಲ್ಲಿ ಹೊರ ಬಂದು ನಂತರ ಬೆಳವಣಿಗೆಯ ಗತಿ ದ್ವಿಗುಣವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆರಂಭದ ಸಂಕೇತಗಳೂ ಇದನ್ನೇ, ಸೂಚಿಸುತ್ತಿದ್ದವು. ರಿಜರ್ವ್ ಬ್ಯಾಂಕು ನೀತಿ ಬಡ್ಡಿ ದರಗಳನ್ನು ತೀರ ಕೆಳಮಟ್ಟದಲ್ಲಿಟ್ಟು ಉದಾರ ನಿಲುವು ಮುಂದುವರಿಸಿತ್ತು. ಸರ್ಕಾರ ಉದ್ಯೋಗ ಸೃಷ್ಟಿಗಾಗಿ ಹಲವು ಮೂಲಸೌಲಭ್ಯ ಯೋಜನೆಗಳನ್ನು ಪ್ರಕಟಿಸಿತ್ತು. ಗ್ರಾಹಕ ವಸ್ತುಗಳ ಬೇಡಿಕೆ ನಿಧಾನವಾಗಿ ಹಳ್ಳಿ ಮತ್ತು ಪಟ್ಟಣಗಳಲ್ಲಿ ಹೆಚ್ಚುತ್ತಿತ್ತು. ಕಳೆದ ವರ್ಷ ಉತ್ತಮ ಮಳೆಯಾಗಿದ್ದು, ಈ ವರ್ಷವೂ ಅದರ ಪುನರಾವರ್ತನೆ ಎಂದು ಹವಾಮಾನ ಇಲಾಖೆ ಹೇಳಿದ್ದು, ಕೃಷಿ ಉತ್ಪನ್ನ ಹೆಚ್ಚುವ ನಿರೀಕ್ಷೆ ಇದೆ.

ಒಂದೆರಡು ವಲಯಗಳು ಸ್ವಲ್ಪ ಹಿಂದಿದ್ದರೂ ಬಹುತೇಕ ಕೈಗಾರಿಕೆಗಳು ಮತ್ತು ಸೇವಾ ವಲಯ ವೇಗವಾಗಿ ಚೇತರಿಸಿಕೊಂಡು ಕೋವಿಡ್ ಹಿಂದಿನ ಮಟ್ಟಕ್ಕಿಂತ (೨೦೧೮=೧೯ರ ಮಟ್ಟಕ್ಕಿಂತ) ಮೇಲೆ ಇದ್ದುದು ಕಂಡು ಬಂದಿತ್ತು. ಏರಿದ ಕಚ್ಚಾ ತೈಲ ಮತ್ತು ಹಲವು ಅವಶ್ಯಕ ಆಮದುಗಳಿಂದಾಗಿ ನಮ್ಮ ಆಮದು ವೆಚ್ಚ ಹೆಚ್ಚುತ್ತಲೇ ಇತ್ತು. ನಮ್ಮ ರಫ್ತುಗಳು ಎಷ್ಟೇ ಹೆಚ್ಚಾದರೂ ವಿದೇಶಿ ವ್ಯಾಪಾರ ಶೇಷ ಕೊರತೆ ಹಿಗ್ಗುತ್ತಲೇ ಇತ್ತು. ನಮ್ಮ ಆಮದುಗಳಲ್ಲಿ ಚಿನ್ನದ ಪಾಲು ಸ್ವಲ್ಪ ದೊಡ್ಡದೆ. ಸೇವಾ ವಲಯದಲ್ಲಿ ನಮ್ಮ ನಿರ್ಯಾತಗಳು ಹೆಚ್ಚಾಗಿದ್ದು ಅನಿವಾಸಿ ಭಾರತೀಯರು ತಾಯ್ನಾಡಿಗೆ ಕಳಿಸುತ್ತಿರುವ ಅವರ ಉಳಿತಾಯಗಳು ಹೇಗೊ ಕೊರತೆ ನಿಭಾಯಿಸಲು ಸಹಕಾರಿಯಾಗಿದ್ದವು. ೨೦೨೧ರ ಕೊನೆಯ ಹೊತ್ತಿಗೆ ವಿನಿಮಯ ನಿಧಿ ಹೆಚ್ಚಾಗಿದ್ದು ೬೫೦ ಬಿಲಿಯನ್ ಡಾಲರ್ ದಾಟಿತ್ತು. ೨೦೨೨-೨೩ರಲ್ಲಿ ನಮ್ಮ ಜಿಡಿಪಿಯು ಎರಡಂಕಿಯ ಬೆಳವಣಿಗೆ ಕಾಣುವುದೆಂದು ಆಶಾವಾದ ವ್ಯಕ್ತವಾಗಿತ್ತು.

ಆದರೆ ಪಾಶ್ಚಿಮಾತ್ಯ ದೇಶಗಳಲ್ಲಿ ೨೦೨೧ರ ಕಡೆಯ ತಿಂಗಳುಗಳಿಂದಲೇ ಹಣದುಬ್ಬರ ಕೈಮೀರಿ ಹೋಗಿದ್ದರಿಂದ ಅಲ್ಲಿಯ ಕೇಂದ್ರಿಯ ಅಲ್ಲಿಯ ಕೇಂದ್ರೀಯ ಬ್ಯಾಂಕುಗಳು ಹಂತ ಹಂತವಾಗಿ ಬಡ್ಡಿ ದರ ಏರಿಸುವ ನಿರ್ಧಾರಗಳನ್ನು ಕೈಗೊಂಡವು. ಆಗಿನಿಂದಲೇ ನಮ್ಮಲ್ಲಿಂದ ಪೇಟೆ ಹೂಡಿಕೆದಾರರು ತಿರುಗಿ ಹೋಗಲು ಆರಂಭಿಸಿದರು. ಸ್ಟಾರ್ಟ್ ಅಪ್ಗಳಿಗೆ ಬರುತ್ತಿದ್ದ ವಿದೇಶ ನೇರ ಹೂಡಿಕೆಗಳೂ ಕಡಿಮೆಯಾದವು. ಆಮದು ಬಿಲ್ಲು ಹೆಚ್ಚುತ್ತಲೆ ಇತ್ತು.

ಹಣದುಬ್ಬರ ನಮ್ಮಲ್ಲಿಯೂ ತನ್ನ ಕರಾಳ ರೂಪ ತೋರಲಾರಂಭಿಸಿತು. ಈ ವರ್ಷದ ಆರಂಭದಲ್ಲಿಯೇ ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಶೇ.೧೫ ದಾಟಿ ಒಂದು ಹಂತದಲ್ಲಿ ಶೇ.೧೫.೮ಕ್ಕೆ ಹೋಗಿತ್ತು. ಇದು ಉತ್ಪಾದಕರ ವೆಚ್ಚ ಹೆಚ್ಚಾಗಲು ಕಾರಣವಾಗಿ ಗ್ರಾಹಕ ವಸ್ತುಗಳ ಬೆಲೆಗಳು ಏರುವಂತೆ ಮಾಡಿತು. ಪರಿಣಾಮವಾಗಿ ಗ್ರಾಹಕ ಬೆಲೆ ಸೂಚ್ಯಂಕ ಆಧಾರಿತ ಹಣ ದುಬ್ಬರ ಶೇ.೮.೦ರ ಸಮೀಪಕ್ಕೆ ಹೋಗಿ ರಿಜರ್ವ್ ಬ್ಯಾಂಕು ಕ್ರಮಗಳಿಂದ ಈಗ ಶೇ.೭.೦ ಸುತ್ತಮುತ್ತ ಇದೆ. ಹಣ ದುಬ್ಬರದ ನಿರೀಕ್ಷೆಯಿಂದಾಗಿ ಜನರು ಹೆಚ್ಚು ಖರ್ಚು ಮಾಡದೇ ಕಾದು ನೋಡುತ್ತಿರುವುದರಿಂದ ನಿರೀಕ್ಷಿಸಿದಷ್ಟು ಬೇಡಿಕೆ ಹೆಚ್ಚಾಗುತ್ತಿಲ್ಲ. ಹೀಗಾಗಿ ಇತ್ತೀಚಿನ ತಿಂಗಳುಗಳಲ್ಲಿ ಕೈಗಾರಿಕಾ ಉತ್ಪಾದನೆ ನಿರೀಕ್ಷಿಸಿದಷ್ಟು ಹೆಚ್ಚಾಗುತ್ತಿಲ್ಲ.

ನಿರುದ್ಯೋಗ ಸಮಸ್ಯೆಗೆ ಬಂದರೆ ಇತ್ತೀಚಿನ ತಿಂಗಳುಗಳಲ್ಲಿ ನರೇಗಾ’ ಅಡಿಯಲ್ಲಿ ಕೆಲಸಕ್ಕಾಗಿ ನೋಂದಾಯಿಸಿಕೊಳ್ಳುವವರ ಮತ್ತು ಕೆಲಸಕ್ಕೆ ಬರುವವರ ಸಂಖ್ಯೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಅಂದರೆ ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿ ಕಡಿಮೆಯಾಗಿದೆ ಎಂದರ್ಥ. ನಗರ ಪ್ರದೇಶಗಳಲ್ಲಿಯ ಸ್ಥಿತಿ ಭಿನ್ನವಾಗೇನು ಇಲ್ಲ.

ಈಗ ಮುಸುಕಿನಲ್ಲಿಯ ನಿರುದ್ಯೋಗ (ಈಜಿಜ್ಠಜಿಛಿ) ನಗರಗಳಲ್ಲಿಯೂ ಕಾಣುತ್ತದೆ. ಅಂದರೆ ಅರ್ಹತೆ ಮತ್ತು ಕೌಶಲ್ಯಗಳಿಗೆ ತಕ್ಕ ಕೆಲಸ ಸಿಗದೆ ಕೈಗೆ ಸಿಕ್ಕ ಕೆಲಸವನ್ನು ಸಿಕ್ಕಷ್ಟು ಪ್ರತಿಫಲಕ್ಕೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಇದು ಉತ್ಪಾದಕತೆ ಮತ್ತು ಉತ್ಪಾದನೆಗೆ ಧಕ್ಕೆ ತರುತ್ತಿದೆ.

ಈ ಎರಡು ತಿಂಗಳಲ್ಲಿ ವಿದೇಶಿ ವಿನಿಮಯ ಪೇಟೆಯಲ್ಲಿ ನಮ್ಮ ರೂಪಾಯಿ ಮೌಲ್ಯ ತೀರಾ ಕುಸಿದು ಡಾಲರಿಗೆ ೮೦ರೂ.ದಾಟಿತ್ತು. ಅಪಾಯದ ಸುಳಿವು ಹಿಡಿದ ರಿಜರ್ವ್ ಬ್ಯಾಂಕು ಮಧ್ಯ ಪ್ರವೇಶಿಸಿ ಒಂದು ಮಟ್ಟದಲ್ಲಿ ನಿಲ್ಲವಂತೆ ಮಾಡಿತು. ಅದಕ್ಕಾಗಿ ವಿನಿಮಯ ನಿಧಿಯಲ್ಲಿಯ ೭೦ ಬಿಲಿಯನ್ ಡಾಲರ್‌ಗೂ ಹೆಚ್ಚು ಕರಗಿ ಜುಲೈ ೨೦ರ ಹೊತ್ತಿಗೆ ನಮ್ಮ ವಿದೇಶಿ ವಿನಿಮಯ ಮೀಸಲು ನಿಧಿ ೫೭೩.೫ ಬಿಲಿಯನ್ ಡಾಲರ್‌ಗೆ ಇಳಿದಿದೆ.

ವಿದೇಶಿ ಪೇಟೆಯಲ್ಲಿ ರೂಪಾಯಿ ಮೌಲ್ಯ ಕಡಿಮೆಯಾದರೆ ನಮ್ಮ ರಫ್ತುಗಳು ಅಲ್ಲಿ ಅಗ್ಗವಾಗಿ ಸ್ಪರ್ಧಾತ್ಮಕ ಬೆಲೆಯಲ್ಲಿ ಹೆಚ್ಚು ಮಾರಿ ಹೆಚ್ಚು ಗಳಿಸಬಹುದೆನ್ನುವದು ನಿಜವಾದರೂ ಅಲ್ಲಿನ ಈಗಿನ ಹೆಚ್ಚಿನ ಬೆಲೆ ಕೊಟ್ಟು ಹಣದುಬ್ಬರವನ್ನೇ ಆಮದು ಮಾಡಿಕೊಂಡಂತಾಗುತ್ತದೆ ಎನ್ನುವುದು ಅಷ್ಟೇ ಸತ್ಯ. ಇದರಿಂದ ನಮ್ಮ ಉತ್ಪಾದನಾ ವೆಚ್ಚ ಹೆಚ್ಚಾಗಿ ಅಲ್ಲಿಯ ಲಾಭ ಇಲ್ಲಿ ಕಳೆದು ಹೋಗುತ್ತದೆ.

೨೦೨೨-೨೩ರಲ್ಲಿ ಜಿ.ಡಿ.ಪಿ.ಶೇ.೭.೦+ ಬೆಳೆವಣಿಗೆ?

ಇವೆಲ್ಲ ಕಾರಣಗಳಿಂದಾಗಿ ಈ ಹಣಕಾಸು ವರ್ಷದ ಜಿ.ಡಿ.ಪಿ ಅಂದಾಜುಗಳನ್ನು ಎಲ್ಲ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವರದಿಗಳು ತಮ್ಮ ಮೊದಲಿನ ಅಂದಾಜುಗಳಿಗಿಂತ ಕಡಿಮೆ ಮಾಡಿವೆ. ನಮ್ಮ ರಿಜರ್ವ್ ಬ್ಯಾಂಕು ಶೇ.೭.೮ರಿಂದ ೭.೨ಕ್ಕೆ ಇಳಿಸಿದ್ದರೆ ಏಶಿಯನ್ ಅಭಿವೃದ್ಧಿ ಬ್ಯಾಂಕು ಶೇ.೭.೫ರಿಂದ ೭.೨ ಕ್ಕೆ ಕಡಿತಗೊಳಿಸಿದೆ. ಭಾರತೀಯ ಉದ್ದಿಮೆ ಮತ್ತು ವ್ಯವಹಾರಗಳ ಸಂಸ್ಥೆ (ಎಫ್‌ಐಸಿಸಿಐ) ಶೇ.೭.೪ರಿಂದ ೭.೦ಕ್ಕೆ ತಂದಿದ್ದರೆ ಸಹಕಾರ ಮತ್ತು ಅಭಿವೃದ್ಧಿಗಾಗಿ ದೇಶಗಳ ಸಂಘಟನೆ ಶೇ.೮.೧ ರಿಂದ ೬.೯ಕ್ಕೆ ನಿಲ್ಲಿಸಿದೆ. ಇನ್ನೂ ಹಲವು ದೇಶಿ ಮತ್ತು ವಿದೇಶಿ ಸಂಶೋಧನಾ ವರದಿಗಳು ತಮ್ಮ ಮೊದಲಿನ ಅಂದಾಜಿಗಿಂತ ಶೇ.೧.೨ರಿಂದ ಶೇ.೧.೫ರಷ್ಟು ಕಡಿಮೆ ಮಾಡಿವೆ. ಇವೆಲ್ಲವೂ ವಾಸ್ತವಕ್ಕೆ ಸಮೀಪವಿರುವುದನ್ನು ಗಮನಿಸಬೇಕು.

ಈ ಅಂದಾಜುಗಳು ಕೋವಿಡ್-೧೯ಕ್ಕಿಂತ ಮೊದಲಿನ ಎರಡು ವರ್ಷಗಳ (೨೦೧೭-೧೮ ಮತ್ತು ೨೦೧೮-೧೯) ಜಿ.ಡಿ.ಪಿ. ಬೆಳವಣಿಗೆ ದರಗಳಿಗಿಂತ ಹೆಚ್ಚು ಇರುತ್ತವೆ ಎನ್ನುವದು ಒಂದು ಸಮಾಧಾನ.

ಒಂದು ಮಾತು: ಭಾರತೀಯರು ಚಿನ್ನದ ಮೇಲಿನ ಮೋಹ ಕಡಿಮೆ ಮಾಡಿದರೆ ಜಿಡಿಪಿ ಶೇ.೦.೦೧ರಷ್ಟಾದರೂ ಹೆಚ್ಚೀತು. ಒಂದು ವರ್ಷ ಚಿನ್ನ ಆಮದು ನಿಲ್ಲಿಸಿದರೆ ಆ ವರ್ಷದ ಆಮದು ವೆಚ್ಚದಲ್ಲಿ ಶೇ.೨೦ರಷ್ಟಾದರೂ ಉಳಿತಾಯವಾಗುತ್ತದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ