ಮೈಸೂರು: ಸಾರ್ವಜನಿಕರ ವಿರೋಧದ ನಡುವೆ ಉದ್ಯಾನವನದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡವನ್ನು ಮುಡಾ ಅಧಿಕಾರಿಗಳು ಗುರುವಾರ ಬೆಳ್ಳಂಬೆಳಿಗ್ಗೆ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದರು.
ಮೈಸೂರಿನ ಬೋಗಾದಿ ಎಸ್‌ಬಿಎಂ ಬಡಾವಣೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಿದ್ದ ಉದ್ಯಾನವನದಲ್ಲಿ ನಾಲ್ಕೈದು ಮಂದಿ ಸೇರಿಕೊಂಡು ಕಟ್ಟಡವನ್ನು ನಿರ್ಮಾಣ ಮಾಡಿದ್ದರು. ಈ ಬಗ್ಗೆ ಸ್ಥಳೀಯರು ಆಯುಕ್ತರಿಗೆ ದೂರು ಸಲ್ಲಿಸಿದ್ದರು. ಈ ಬಗ್ಗೆ ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿದ್ದರಿಂದ ವಲಯ ಆಯುಕ್ತರು ಪರಿಶೀಲಿಸಿ ಮಾಹಿತಿ ಕೊಟ್ಟಿದ್ದರು. ಅದರಂತೆ, ಗುರುವಾರ ಜೆಸಿಬಿ ಯಂತ್ರ,ಲಾರಿ,ಟಿಪ್ಪರ್‌ಗಳ ಸಮೇತ ಸ್ಥಳಕ್ಕೆ ಭೇಟಿ ನೀಡಿದ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಕಾರ್ಯಾಚರಣೆ ನಡೆಸುವ ಮೂಲಕ ತೆರವುಗೊಳಿಸಿದರು.
ಬಳಿಕ,ಕಾನೂನುಬಾಹಿರವಾಗಿ ಕಟ್ಟಡ ನಿರ್ಮಿಸಿದವರ ವಿರುದ್ಧ ಕ್ರಮಕ್ಕೆ ನೋಟಿಸ್‌ಜಾರಿಗೊಳಿಸುವಂತೆ ಸೂಚಿಸಿದರು. ಮತ್ತೊಂದೆಡೆ ದಟ್ಟಗಳ್ಳಿ ಮೂರನೇ ಹಂತ ಮಹಾಮನೆ ಸರ್ಕಲ್ ರಸ್ತೆಯಲ್ಲಿ ಮನೆ ನಿರ್ಮಾಣಕ್ಕಾಗಿ ರಸ್ತೆ ಬದಿಯಲ್ಲಿ ಕಟ್ಟಿದ್ದ ಶೆಡ್‌ಗಳನ್ನು ತೆರವುಗೊಳಿಸದೆ ಇರುವ ಬಗ್ಗೆ ದೂರು ನೀಡಿದ್ದನ್ನು ಸ್ವೀಕರಿಸಿದ್ದ ಆಯುಕ್ತರು ಶೆಡ್‌ಗಳನ್ನು ತೆರವುಗೊಳಿಸುವಂತೆ ನೋಡಿಕೊಂಡರು. ಮನೆ ನಿರ್ಮಾಣ ಮಾಡಿದ ಮೇಲೆ ಶೆಡ್ ತೆರವುಗೊಳಿಸುವಂತೆ ಮಾಲೀಕರಿಗೆ ಮೂರ್ನಾಲ್ಕು ಬಾರಿ ಹೇಳಿದರೂ ಗಮನಹರಿಸದ ಕಾರಣ ಜೆಸಿಬಿ ಯಂತ್ರದಿಂದ ನೆಲಸಮಗೊಳಿಸಲಾಯಿತು. ಈ ಸಂದರ್ಭದಲ್ಲಿ ಅಧೀಕ್ಷಕ ಅಭಿಯಂತರ ಚನ್ನಕೇಶವ, ಕಾರ್ಯಪಾಲಕ ಅಭಿಯಂತರರಾದ ಮೋಹನ್, ಧರ್ಮೇಂದ್ರಪ್ಪ, ಸಹಾಯಕ ಕಾರ್ಯಪಾಲಕ ಅಭಿಯಂತರ ಕಿರಣ್ ಇನ್ನಿತರರು ಹಾಜರಿದ್ದರು.





