ಮೈಸೂರು: ರಸ್ತೆ ಅಪಘಾತ ಹಾಗೂ ಸುರಕ್ಷತಾ ಚಾಲನೆ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ನಗರದ ಟ್ರಿನಿಟಿ ಕಾಲೇಜು ವತಿಯಿಂದ ಭಾನುವಾರ ಏರ್ಪಡಿಸಿದ್ದ ‘ರೈಡ್ ಫಾರ್ ಲೈಫ್’ ರ್ಯಾಲಿಯಲ್ಲಿ ನೂರಾರು ಜನರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಭಾನುವಾರ ಬೆಳಿಗ್ಗೆ ನಗರದ ಅರಮನೆ ಮುಂಭಾಗವಿರುವ ಕೋಟೆ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಆರಂಭಗೊಂಡ ರ್ಯಾಲಿಗೆ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಅವರಿಗೆ ಟ್ರಿನಿಟಿ ಸಂಸ್ಥೆಯ ಅಧ್ಯಕ್ಷ ಎಲೈಜರ್ ಮಿಲ್ಟನ್ ಸಾಥ್ ನೀಡಿದರು. ರೋಟರಿ ಮೈಸೂರು ಮಿಡ್‌ಟೌನ್, ‘ಆಂದೋಲನ’ ದಿನಪತ್ರಿಕೆ, ಸೈಕ್ಲಿಂಗ್ ಸೂರು ಟ್ರೈನಿಂಗ್ ಅಕಾಡೆಮಿ, ಮೋಟೋ ರೋಡ್ ಸಂಸ್ಥೆಗಳು ಸಹಭಾಗಿತ್ವ ವಹಿಸಿದ್ದವು.ಈ ವೇಳೆ ಮಾತನಾಡಿದ ಮರಿತಿಬ್ಬೇಗೌಡ ಅವರು, ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಸಾಕಷ್ಟು ಮಂದಿ ಸಾವಿಗೀಡಾಗುತ್ತಿದ್ದಾರೆ. ಇದು ಆತಂಕದ ವಿಚಾರ. ಸುರಕ್ಷಿತವಾಗಿ ವಾಹನ ಚಾಲನೆ ಮಾಡುವ ಬಗ್ಗೆ ಯುವ ಜನತೆಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ.
ಪೊಲೀಸ್ ಇಲಾಖೆ ಕೂಡ ಆಗಿಂದಾಗ್ಗೆ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. ಅದರ ಜೊತೆಗೆ ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳಿಗೆ ಸುರಕ್ಷಿತ ಚಾಲನೆ ಬಗ್ಗೆ ಶಾಲಾ, ಕಾಲೇಜು ಹಂತದಲ್ಲಿೆುೀಂ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಟ್ರಿನಿಟಿ ಕಾಲೇಜು ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ ಎಂದರು.
ಅರಮನೆ ಮುಂಭಾಗದಿಂದ ಆರಂಭವಾದ ರ್ಯಾಲಿ, ಹಾರ್ಡಿಂಜ್ ವೃತ್ತ, ಗನ್‌ಹೌಸ್, ಚಾಮರಾಜ ಜೋಡಿ ರಸ್ತೆ, ರಾಮಸ್ವಾಮಿ ವೃತ್ತ, ಜೆಎಲ್‌ಬಿ ರಸ್ತೆ, ಮೆಟ್ರೋಪೂಲ್ ವೃತ್ತ, ಕಾಳಿದಾಸ ರಸ್ತೆ ಮೂಲಕ ಸಾಗಿ ಟ್ರಿನಿಟಿ ಕಾಲೇಜು ಆವರಣದಲ್ಲಿ ಅಂತ್ಯಗೊಂಡಿತು.
ರ್ಯಾಲಿಯಲ್ಲಿ ೨೦೦ ಮಂದಿ ಸೈಕ್ಲಿಸ್ಟ್, ೧೦೦ ಮಂದಿ ಸಾರ್ವಜನಿಕರು, ೨೦೦ಕ್ಕೂ ಹೆಚ್ಚು ಮಂದಿ ಟ್ರನಿಟಿ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮದ ನೇತೃತ್ವವನ್ನು ಕಾಲೇಜಿನ ಉಪ ಪ್ರಾಂಶುಪಾಲ ಎಂ.ಪ್ರವೀಣ್‌ಕುಮಾರ್ ವಹಿಸಿದ್ದರು.