ಹತ್ಯೆಗೀಡಾದ ಆರ್.ಎನ್. ಕುಲಕರ್ಣಿ ಸಾವಿಗೆ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ, ವಿವಾದಿತ ಮನೆ ಇನ್ನೆರಡು ದಿನದಲ್ಲಿ ನೆಲಸಮ
ಮೈಸೂರು: ದೇಶಕ್ಕಾಗಿ ಸೇವೆ ಸಲ್ಲಿಸಿದ ಕೇಂದ್ರ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿಯೊಬ್ಬರು ಕೊಲೆಯಾಗಿರುವುದು ದುರದೃಷ್ಟ ಪ್ರಕರಣ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಮೈಸೂರು ವಿವಿ ಕ್ಯಾಂಪಸ್ಸಿನಲ್ಲಿ ನವೆಂಬರ್ ನಾಲ್ಕರಂದು ಕೊಲೆಯಾದ ಕೇಂದ್ರ ಗುಪ್ತಚರ ಇಲಾಖೆ ನಿವೃತ್ತ ಅಧಿಕಾರಿ ಆರ್. ಎನ್. ಕುಲಕರ್ಣಿ ಅವರ ಮನೆಗೆ ಗುರುವಾರ ಭೇಟಿ ನೀಡಿದ ಸಚಿವರು,ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಪ್ರಕರಣವನ್ನು ಅಪಘಾತ ಎಂದು ಬಿಂಬಿಸುವ ಯತ್ನ ನಡೆದಿತ್ತು. ಆದರೆ ಅದನ್ನು ಕೊಲೆ ಎಂದು ಕಂಡುಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದಕ್ಕಾಗಿ ಪೊಲೀಸರನ್ನ ಅಭಿನಂದಿಸುತ್ತೇನೆ. ಆದರೆ ನಿವೃತ್ತ ಅಧಿಕಾರಿಯ ಹತ್ಯೆ ನಡೆಯಬಾರದಿತ್ತು. ಅವರು ಹೋರಾಟ ನಡೆಸಿದ್ದ ಅಕ್ರಮ ಮನೆ ನಿರ್ಮಾಣದ ತೆರವಿಗೆ ಕೋರ್ಟ್ ಆದೇಶ ಬಂದರೆ ಅದನ್ನು ಕಾರ್ಯಗತಗೊಳಿಸಲು ಪೊಲೀಸ್ ರಕ್ಷಣೆ ನೀಡುತ್ತೇವೆ ಎಂದರು. ಶಾಸಕ ಎಸ್.ಎ.ರಾಮ್‌ದಾಸ್ ಮತ್ತು ಸ್ಥಳೀಯ ಮುಖಂಡರು ಸಚಿವರ ಜತೆಗಿದ್ದರು.
ಮಾನಸ ಗಂಗೋತ್ರಿ ಆವರಣದಲ್ಲಿ ವಾಕ್ ಮಾಡುತ್ತಿದ್ದ ಆರ್.ಎನ್.ಕುಲಕರ್ಣಿ ಅವರಿಗೆ ಉದ್ದೇಶಪೂರ್ವಕವಾಗಿ ಕಾರಿನಿಂದ ಡಿಕ್ಕಿ ಹೊಡೆಸಿ ಅಪಘಾತ ಮಾಡಲಾಗಿತ್ತು. ಈ ಸಂಬಂಧ ಅವರ ನೆರೆಮನೆಯ ಮಾದಪ್ಪ ಅವರ ಕಿರಿಯ ಮಗ ಮನು ಮತ್ತು ಆತನ ಸ್ನೇಹಿತ ವರುಣ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಕೇಂದ್ರ ಗುಪ್ತಚರ ಇಲಾಖೆಯಲ್ಲಿ ದೀರ್ಘ ಅವಧಿಗೆ ಸೇವೆ ಸಲ್ಲಿಸಿ, ದೇಶದ ಆಂತರಿಕ ಭದ್ರತೆ ಸಂಬಂಧ ಮೂರು ಪುಸ್ತಕಗಳನ್ನು ಬರೆದಿರುವ ನಿವೃತ್ತ ಅಧಿಕಾರಿ ಕ್ಷುಲ್ಲಕ ಪ್ರಕರಣವೊಂದರಲ್ಲಿ ಮೃತಪಟ್ಟಿದ್ದು ಅವರ ಆಪ್ತರ ವರ್ಗದಲ್ಲಿ ಮಾತ್ರವಲ್ಲ ಜನ ಸಮುದಾಯದಲ್ಲೂ ದು:ಖಕ್ಕೆ ಕಾರಣವಾಗಿತ್ತು.
ನ್ಯಾಯ ಕೇಳಿದ್ದಕ್ಕೆ ಕೊಲೆಯಾದ್ರಾ ?
ನಗರದ ಟಿ.ಕೆ.ಬಡಾವಣೆಯಲ್ಲಿ ಕುಲಕರ್ಣಿ ಅವರ ಮನೆಯ ಬಳಿ ಸ್ವಲ್ಪವೂ ಅಂತರ ಬಿಡದೆ ಮಾದಪ್ಪ ಎಂಬವರು ಮಹಾನಗರ ಪಾಲಿಕೆ ಬೈಲಾದ ವಿರುದ್ಧವಾಗಿ ಮನೆ ಕಟ್ಟಿದ್ದರು. ಮನೆಯನ್ನು ಕಟ್ಟುವ ಹಂತದಲ್ಲಿಯೇ ಜಾಗ ಬಿಡುವಂತೆ ಕುಲಕರ್ಣಿ ಅವರು ಮಾದಪ್ಪನವರನ್ನು ಕೇಳಿದ್ದರು. ಆದರೆ, ಈ ಕೋರಿಕೆಯನ್ನು ಮಾದಪ್ಪ ತಿರಸ್ಕರಿಸಿದ್ದರು. ಹೀಗಾಗಿ, ಅಕ್ರಮ ನಿರ್ಮಾಣ ಮಾಡಿದ ಮಾದಪ್ಪ ಅವರ ವಿರುದ್ಧ ಆರ್.ಎನ್.ಕುಲಕರ್ಣಿ ಅವರು ಕಾನೂನು ಹೋರಾಟ ಆರಂಭಿಸಿದ್ದರು.
ಕಾನೂನು ಹೋರಾಟ ಆರಂಭಿಸಿದ ದಿನದಿಂದಲೇ ಮಾದಪ್ಪ ಮತ್ತು ಅವರ ಮಕ್ಕಳು, ಸಹಚರರು ಕುಲಕರ್ಣಿ ಅವರಿಗೆ ಜೀವ ಬೆದರಿಕೆ ಹಾಕಿದ್ದರು ಎನ್ನಲಾಗಿದೆ. “ನನ್ನನ್ನು ಹತ್ಯೆ ಮಾಡಲು ಸಂಚು ಮಾಡುತ್ತಿದೆʼʼ ಎಂದು ಕುಲಕರ್ಣಿ ಅವರು ಅಮೇರಿಕಾದಲ್ಲಿ ಇದ್ದ ತಮ್ಮ ಮಗಳು ಮತ್ತು ಅಳಿಯನ ಜೊತೆಗೆ ಹೇಳಿಕೊಂಡಿದ್ದರು. ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆ, ನಗರ ಪೊಲೀಸ್ ಆಯುಕ್ತರು, ಪ್ರಧಾನಿ ಕಾರ್ಯಾಲಯಕ್ಕೂ ದೂರು ನೀಡಿದ್ದರು. ದೂರಿನಲ್ಲಿ ಮಾದಪ್ಪ ಮತ್ತು ಮಕ್ಕಳು ಬಳಸುವ ವಾಹನಗಳ ನಂಬರ್ ಕೂಡ ನೀಡಿದ್ದರು. ಆದರೆ ತಮ್ಮ ಸುರಕ್ಷತೆ ಬಗ್ಗೆ ತೀವ್ರ ಎಚ್ಚರಿಕೆ ವಹಿಸಿದ್ದರೂ ಕುಲಕರ್ಣಿ ಅವರು ಕೊಲೆಗೀಡಾಗಿದ್ದರು.
ಇದೀಗ ವಿವಾದಿತ ಮನೆ ನೆಲಸಮಗೊಳಿಸಲು ಮೈಸೂರು ಮಹಾನಗರ ಪಾಲಿಕೆ ಮಾದಪ್ಪ ಅವರಿಗೆ ಅಂತಿಮ ನೋಟಿಸ್ ನೀಡಿದೆ. “” ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಮಾದಪ್ಪ ಅವರಿಗೆ ನ. 2ರಂದು ಅಂತಿಮ ನೋಟೀಸ್ ನೀಡಲಾಗಿತ್ತು. ಹತ್ತು ದಿನಗಳೊಳಗೆ ಉತ್ತರಿಸುವ ಜತೆಗೆ ಕಾನೂನುಬಾಹಿರವಾಗಿ ಕಟ್ಟಿರುವ ಕಟ್ಟಡವನ್ನು ಅವರು ನೆಲಸಮಗೊಳಿಸಬೇಕು. ಇಲ್ಲದಿದ್ದರೆ ಪಾಲಿಕೆ ವತಿಯಿಂದ ಕಾರ್ಯಾಚರಣೆ ನಡೆಸುತ್ತೇವೆ. ಇನ್ನು ಎರಡು ದಿನಗಳ ಕಾಲ ಸಮಯ ಇರುವುದರಿಂದ ಕಾದು ನೋಡುತ್ತೇವೆʼʼ ಎಂದು ನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ತಿಳಿಸಿದ್ದಾರೆ.