ಮೈಸೂರು: ಪೌರ ಕಾರ್ಮಿಕರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಆಲಿಸುವ ಉದ್ದೇಶದಿಂದ ಬುಧವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಪೌರ ಕಾರ್ಮಿಕರ ಸಂಘದ ಸದಸ್ಯರೊಂದಿಗೆ ಜಿಲ್ಲಾಧಿಕಾರಿ ರಾಜೇಂದ್ರ ಅವರು ಸಭೆ ನಡೆಸಿದರು.
ಈ ವೇಳೆ ಮಾತನಾಡಿದ ಪೌರ ಕಾರ್ಮಿಕ ಮುಖಂಡರು, ಪೌರ ಕಾರ್ಮಿಕರ ನೇಮಕಾತಿ ವೇಳೆ ರೋಸ್ಟರ್ ಪದ್ದತಿಯನ್ನು ರದ್ದು ಮಾಡಬೇಕು. ೭೦೦ ಜನಸಂಖ್ಯೆಗೆ ಅನುಗುಣವಾಗಿ ಪೌರ ಕಾರ್ಮಿಕರ ಹುದ್ದೆಗೆ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಮೈಸೂರಿನ ಜನಸಂಖ್ಯೆ ೧೦ ಲಕ್ಷವನ್ನು ದಾಟಿದ್ದು, ಹಾಲಿ ಇರುವ ಪೌರ ಕಾರ್ಮಿಕರಿಗೆ ಹೆಚ್ಚಿನ ಹೊರೆಯಾಗುತ್ತಿದೆ. ಹೀಗಾಗಿ ಅಗತ್ಯಕ್ಕೆ ತಕ್ಕಂತೆ ನೇಮಕಾತಿ ನಡೆಯಬೇಕು. ಸೇವೆಯಲ್ಲಿರುವ ಪೌರಕಾರ್ಮಿಕರು ಮೃತರಾದಲ್ಲಿ ಅವರಿಗೆ ೧೦ ಲಕ್ಷ ರೂ. ಪರಿಹಾರ ಹಾಗೂ ಅವರ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕು ಎಂದು ಹೇಳಿದರು.
ನಗರಪಾಲಿಕೆಗೆ ಸೇರಿದ ಮಳಲವಾಡಿ ಗ್ರಾಮದಲ್ಲಿ ೧೫೮ ಮಂದಿ ಪೌರ ಕಾರ್ಮಿಕರಿಗೆ ಜಿ ಪ್ಲಸ್ ಮಾದರಿಯಲ್ಲಿ ಮನೆಗಳನ್ನು ನಿರ್ಮಾಣ ಮಾಡಿಕೊಡಬೇಕು. ಮನೆಮನೆ ಕಸ ಸಂಗ್ರಹಿಸುವ ಕೆಲಸದಲ್ಲಿರುವ ೨೫೦ಕ್ಕೂ ಹೆಚ್ಚು ನೌಕರರನ್ನು ಖಾಯಂಗೊಳಿಸಬೇಕು ಎಂದು ಮನವಿ ಮಾಡಿದರು.
ದಿನನಿತ್ಯ ಕರ್ತವ್ಯ ನಿರ್ವಹಿಸುವ ಪೌರ ಕಾರ್ಮಿಕರಿಗೆ ಗುರುತಿನ ಚೀಟಿ, ಇಎಸ್‌ಐ, ಪಿಎಫ್, ಬೆಳಗಿನ ಉಪಹಾರ, ಸಂಕಷ್ಟ ಭತ್ಯೆ ನೀಡಬೇಕು. ಅಭಯ ವಾಹನಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ೧೨ ಮಂದಿ ಚಾಲಕರಿಗೆ ಕನಿಷ್ಠ ವೇತನ ಹಾಗೂ ವಿವಿಧ ಸೌಲಭ್ಯಗಳನ್ನು ಒದಗಿಸಬೇಕು ಎಂದು ಹೇಳಿದರು.ಕಡಕೊಳ ಪಟ್ಟಣ ಪಂಚಾಯ್ತಿಯಲ್ಲಿ ಜನಸಂಖ್ಯೆ ಆಧಾರದಲ್ಲಿ ಪೌರ ಕಾರ್ಮಿಕರನ್ನು ನೇಕಮ ಮಾಡಿಲ್ಲ. ಇದರಿಂದ ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವವರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.
ಪೌರ ಕಾರ್ಮಿಕರ ಸಮಸ್ಯೆಗಳನ್ನು ಸಮಾಧಾನದಿಂದಲೇ ಆಲಿಸಿದ ಜಿಲಾಧಿಕಾರಿ ಕೆ.ವಿ.ರಾಜೇಂದ್ರ ಅವರು, ಪೌರಕಾರ್ಮಿಕರ ಅಗತ್ಯತೆಗಳನ್ನು ಪೂರೈಸಲು ಸರ್ಕಾರ ಬದ್ದವಿದೆ. ಈ ಸಂಬಂದ ಅಧಿಕಾರಿಗಳು ಅವರ ಸಮಸ್ಯೆಗಳ ಬಗ್ಗೆ ಹಾಗೂ ಬೇಡಿಕೆಗಳ ವಿವಿರವನ್ನು ಒದಗಿಸಬೇಕು ಎಂದು ಹೇಳಿದರು.
ನಗರಪಾಲಿಕೆ ಆಯುಕ್ತ ಲಕ್ಷ್ಮಿಕಾಂತರೆಡ್ಡಿ, ವಿವಿಧ ಇಲಾಖೆಯ ಅಧಿಕಾರಿಗಳು, ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು, ಕಾರ್ಯಾಧ್ಯಕ್ಷ ಮಂಚಯ್ಯ, ಪ್ರಧಾನ ಕಾರ್ಯದರ್ಶಿ ದಿನೇಶ್‌ಕುಮಾರ್, ಉಪಾಧ್ಯಕ್ಷ ಜಿ.ಎನ್.ಚಾಮ ಮುಂತಾದವರು ಸಭೆಯಲ್ಲಿ ಹಾಜರಿದ್ದರು.