Mysore
23
overcast clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಮಂಡ್ಯ: ಅ.31ರವರೆಗೆ ಸ್ವಚ್ಛ ಭಾರತ 2.0 ಅಭಿಯಾನ

ಮಂಡ್ಯ: ಸಾರ್ವಜನಿಕರ ಸಹಭಾಗೀತ್ವದಲ್ಲಿ ಅ.೧ರಿಂದ ೩೧ರವರೆಗೆ ನಡೆಯಲಿರುವ ‘ಸ್ವಚ್ಛ ಭಾರತ ೨.೦’ ಅಭಿಯಾನದಲ್ಲಿ ದೇಶಾದ್ಯಂತ ೧ ಕೋಟಿ ಕಿಲೋ ಏಕಬಳಕೆಯ ಪ್ಲಾಸ್ಟಿಕ್ ಸಂಗ್ರಹಿಸಿ ವಿಲೇವಾರಿಗೆ ಗುರಿ ಹೊಂದಲಾಗಿದೆ ಎಂದು ನೆಹರು ಯುವ ಕೇಂದ್ರದ(ಎನ್‌ವೈಕೆ) ರಾಜ್ಯ ನಿರ್ದೇಶಕ ಎಂ.ಎನ್.ನಟರಾಜ್ ತಿಳಿಸಿದರು.

ಕಳೆದ ವರ್ಷ ನಡೆದ ‘ಸ್ವಚ್ಛ ಭಾರತ’ ಅಭಿಯಾನದ ಯಶಸ್ಸಿನ ಹಿನ್ನೆಲೆಯಲ್ಲಿ ಈ ವರ್ಷ ಅ.೧ರಿಂದ ‘ಸ್ವಚ್ಛ ಭಾರತ ೨.೦’ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಎನ್‌ವೈಕೆ, ಯುವ ಕ್ಲಬ್‌ಗಳು, ಎನ್‌ಸಿಸಿ, ಎನ್‌ಎಸ್‌ಎಸ್ ಘಟಕಗಳು, ಸ್ಕೌಟ್ಸ್ ಅಂಡ್ ಗೈಡ್ಸ್ ಮೂಲಕ ದೇಶಾದ್ಯಂತ ಎಲ್ಲ ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಮುಖ್ಯವಾಗಿ ಏಕ ಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಿ, ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವುದು, ಪ್ಲಾಸ್ಟಿಕ್ ಬಗ್ಗೆ ಜನಜಾಗೃತಿ ಮೂಡಿಸುವುದು ‘ಸ್ವಚ್ಛ ಭಾರತ ೨.೦’ ಅಭಿಯಾನದ ಉದ್ದೇಶವಾಗಿದೆ. ಗ್ರಾಮ ಮಟ್ಟದಲ್ಲಿ ಸಂಗ್ರಹವಾಗುವ ಪ್ಲಾಸ್ಟಿಕ್‌ ಅನ್ನು ಗ್ರಾಪಂ ಪಿಡಿಒಗೆ ಹಾಗೂ ಜಿಲ್ಲಾ ನಗರಾಭಿವೃದ್ಧಿ ಕೋಶದ ಮೂಲಕ ನಗರಸಭೆ ವ್ಯಾಪ್ತಿಯಲ್ಲಿ ಪೌರಾಯುಕ್ತರು, ಪಟ್ಟಣ ಪ್ರದೇಶಗಳಲ್ಲಿ, ಪುರಸಭೆ/ಪಟ್ಟಣ ಪಂಚಾಯಿತಿಗಳ ಮುಖ್ಯಾಧಿಕಾರಿಗಳಿಗೆ ನೀಡಿ, ಎಷ್ಟು ಕಿಲೋ ಪ್ಲಾಸ್ಟಿಕ್ ನೀಡಲಾಗಿದೆ ಎಂಬುದಕ್ಕೆ ಸ್ವೀಕೃತಿ ಪತ್ರ ಪಡೆದುಕೊಳ್ಳಬಹುದು ಎಂದರು.

ದೇಶದ ೭೪೪ ಜಿಲ್ಲೆಗಳಲ್ಲು ‘ಸ್ವಚ್ಛ ಭಾರತ ೨.೦’ ಅಭಿಯಾನ ನಡೆಯುತ್ತಿದೆ. ಕರ್ನಾಟಕದ ೩೧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಈ ಅಭಿಯಾನದಲ್ಲಿ ೪.೧೦ ಲಕ್ಷ ಕಿಲೋ ಏಕಬಳಕೆಯ ಪ್ಲಾಸ್ಟಿಕ್ ಸಂಗ್ರಹಿಸುವ ಗುರಿ ಹೊಂದಲಾಗಿದೆ. ಕೆಲವೆಡೆ ಅಧಿಕ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸಂಗ್ರಹವಾಗುತ್ತಿದ್ದು, ಅದರ ದಾಸ್ತಾನು ಸವಾಲಾಗಿದೆ. ಹೀಗಾಗಿ ಅಂತಹ ಕಡೆಗಳಲ್ಲಿ ಸ್ಥಳೀಯವಾಗಿಯೇ ಪ್ಲಾಸ್ಟಿಕ್ ವಿಲೇವಾರಿಗೆ ಕ್ರಮ ವಹಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾುಂಕ ನಿರ್ದೇಶಕ ಜಿ.ಓಂಪ್ರಕಾಶ್, ವಿವಿಧ ಕಾಲೇಜುಗಳ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಾದ ಡಾ.ಎಂ.ಕೆ.ಕೆಂಪಮ್ಮ, ಕೆ.ಬಿ.ಲೋಕೇಶ್, ಡಿ.ಉಮೇಶ್, ಎನ್‌ವೈಕೆ ಲೆಕ್ಕಾಧಿಕಾರಿ ಚಿಂದಗಿರಿಗೌಡ, ನಿವೃತ್ತ ಲೆಕ್ಕಾಧಿಕಾರಿ ಬಸವರಾಜು ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ