ಶ್ರೀರಂಗಪಟ್ಟಣ: ₹7.11 ಲಕ್ಷ ಶುಲ್ಕ ಬಾಕಿ ಉಳಿಸಿಕೊಂಡಿರುವ ಪಟ್ಟಣದ ಮಿನಿ ವಿಧಾನಸೌಧದ ವಿದ್ಯುತ್ ಸಂಪರ್ಕ ವನ್ನು ಸೆಸ್ಕ್ ಸಿಬ್ಬಂದಿ ಮಂಗಳವಾರ ಕಡಿತಗೊಳಿಸಿದರು.
ತಹಶೀಲ್ದಾರ್ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಮಹಿಳಾ–ಮಕ್ಕಳ ಕಲ್ಯಾಣ ಇಲಾಖೆ, ಸರ್ವೆ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆಹಾರ ಇಲಾಖೆ, ಉಪ ಖಜಾನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ‘ಯುಪಿಎಸ್ ಇರುವೆಡೆ ಕೆಲಸಗಳು ನಡೆದವು. ಬುಧವಾರ ಸಂಪರ್ಕ ಕಲ್ಪಿಸ ದಿದ್ದರೆ ಎಲ್ಲ ಕೆಲಸಗಳು ಸ್ಥಗಿತಗೊಳ್ಳಲಿವೆ’ ಎಂದು ಸಿಬ್ಬಂದಿ ತಿಳಿಸಿದರು.
‘ಎಲ್ಲ ಕಚೇರಿಗಳಿಗೂ ಸೇರಿ ಒಂದೇ ಮೀಟರ್ ಅಳವಡಿಸಿದ್ದು, ಕಂದಾಯ ಇಲಾಖೆಯೇ ಬಿಲ್ ಪಾವತಿಸಬೇಕಾಗಿದೆ. ಜಿಲ್ಲಾಧಿಕಾರಿ ಗಮನ ಸೆಳೆದಿದ್ದೇನೆ’ ಎಂದು ತಹಶೀಲ್ದಾರ್ ಶ್ವೇತಾ ರವೀಂದ್ರ ಪ್ರತಿಕ್ರಿಯಿಸಿದರು. ‘ಸದ್ಯ ₹50 ಸಾವಿರ ದವರೆಗೆ ಪಾವತಿಸಬಹುದು. ಉಳಿದದ್ದನ್ನು ಎಲ್ಲಿಂದ ತರಲಿ’ ಎಂದು ಪ್ರಶ್ನಿಸಿದರು.