ಮಡಿಕೇರಿ: ತಾಲ್ಲೂಕಿನ ನೆಲ್ಲಿಹುದಿಕೇರಿ ಗ್ರಾಮದಲ್ಲಿ ಮನೆಯ ಛಾವಣಿಗೆ ಹಾಕಿದ್ದ ಶೀಟ್ ನಡಿ ಸೇರಿಕೊಂಡಿದ್ದ ನಾಗರಹಾವೊಂದನ್ನು ಸೆರೆ ಹಿಡಿಯುವಲ್ಲಿ ಇಲ್ಲಿನ ಸ್ನೇಕ್ ಸುರೇಶ್ ಯಶಸ್ವಿಯಾಗಿದ್ದಾರೆ.
ದೊಡ್ಡ ಗಾತ್ರದ ನಾಗರಹಾವು ನೆಲ್ಲಿಹುದಿಕೇರಿ ಗ್ರಾಮದ ಕುಂಬಾರ ಗುಂಡಿ ರಾಜೇಶ್ ಎಂಬವರ ಮನೆಯ ಶೀಟ್ನಲ್ಲಿ ಆಶ್ರಯ ಪಡೆದಿತ್ತು. ಹಾವು ಕಂಡು ಭಯಭೀತರಾದ ರಾಜೇಶ್ ಕುಟುಂಬ ಕೂಡಲೇ ಗುಹ್ಯ ಗ್ರಾಮದ ಉರಗ ಪ್ರೇಮಿ ಸುರೇಶ್ ಪೂಜಾರಿ ಅವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದರು. ಸುರೇಶ್ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದಾಗ ಅಡುಗೆ ಕೋಣೆಯ ಮೇಲೆ ಶೀಟ್ನಡಿ ಹಾವು ಇರುವುದು ಕಂಡುಬಂತು. ಇದನ್ನು ಕೆಳಗಿನಿಂದ ಸೆರೆ ಹಿಡಿಯುವುದು ಅಸಾಧ್ಯವಾದ ಕಾರಣ ಸುರೇಶ್ ಅವರು ಗೋಡೆ ಮೇಲೆ ಹತ್ತಿ ಶೀಟ್ ಮೇಲಕ್ಕೆತ್ತಿ ಅತ್ಯಂತ ಸಾಹಸದಿಂದ ನಾಗರ ಹಾವನ್ನು ಸೆರೆ ಹಿಡಿದಿದ್ದಾರೆ. ಬಳಿಕ ನಾಗರಹಾವನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಸುರೇಶ್ ಅವರ ಸಾಹಸಕ್ಕೆ ಗ್ರಾಮಸ್ಥರ ಮೆಚ್ಚುಗೆ ಸೂಚಿಸಿದ್ದಾರೆ. ರಾಜೇಶ್ ಅವರ ಮನೆಯವರು ಕೃತಜ್ಞತೆ ಸೂಚಿಸಿದ್ದಾರೆ.