ಮೈಸೂರು: ನವೆಂಬರ್ 13ರಂದು ‘ಟಿಪ್ಪು ನಿಜ ಕನಸುಗಳು’ ಎಂಬ ಕೃತಿ ಬಿಡುಗಡೆ ಮಾಡುತ್ತೇವೆ. ನವೆಂಬರ್ 20ರಂದು ಟಿಪ್ಪು ನಿಜ ಕನಸುಗಳು ನಾಟಕ ಪ್ರದರ್ಶನ ಮಾಡಲಾಗುತ್ತೆ ಎಂದು ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಹಿತಿ ನೀಡಿದ್ದಾರೆ.
ಟಿಪ್ಪುವಿನ ಸತ್ಯ ವಿಚಾರಗಳನ್ನು ತಿಳಿಸುವ ಉದ್ದೇಶದಿಂದ ಕೃತಿ ರಚನೆ ಮಾಡಲಾಗಿದ್ದು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಸಾಹಿತಿ ಎಸ್.ಎಲ್.ಭೈರಪ್ಪ, ಸಂಸದ ಪ್ರತಾಪ್ ಸಿಂಹ, ರೋಹಿತ್ ಚಕ್ರತೀರ್ಥ ಪಾಲ್ಗೊಳ್ಳುತ್ತಾರೆ. ನ.20ರಂದು 3 ಗಂಟೆ 20 ನಿಮಿಷದ ನಾಟಕ ಪ್ರದರ್ಶನ ಆಗಲಿದೆ ಎಂದು ಅಡ್ಡಂಡ ಕಾರ್ಯಪ್ಪ ತಿಳಿಸಿದ್ದಾರೆ.
‘ಟಿಪ್ಪು ನಿಜ ಕನಸುಗಳು’ ನಾಟಕವನ್ನು ಸುಮಾರು 30 ಕಲಾವಿದರ ತಂಡ ಒಟ್ಟು 100 ಪ್ರದರ್ಶನಗಳನ್ನು ಮಾಡುವ ಉದ್ದೇಶವನ್ನು ಹೊಂದಿದೆ. ಅಯೋಧ್ಯಾ ಪ್ರಕಾಶನದಿಂದ ಟಿಪ್ಪು ನಿಜ ಕನಸುಗಳು ಪುಸ್ತಕ ಪ್ರಕಟವಾಗಿದ್ದು ಎಸ್ ಎಲ್ ಭೈರಪ್ಪ ಮುನ್ನುಡಿ ಬರೆದಿದ್ದಾರೆ. ಹಾಗೂ ಚಕ್ರವರ್ತಿ ಸೂಲಿಬೆಲೆ ಹಿನ್ನುಡಿ ಬರೆದಿದ್ದಾರೆ.
ಡಿ.8ರಿಂದ 15ರವರೆಗೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವ
ಮೈಸೂರಿನಲ್ಲಿ ಈ ಬಾರಿ ಡಿಸೆಂಬರ್ 08 ರಿಂದ ಡಿಸೆಂಬರ್ 15ರವರೆಗೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಕಾರ್ಯಕ್ರಮ ನಡೆಯಲಿದೆ. ಭಾರತೀಯತೆ ವಸ್ತು ವಿಷಯದೊಂದಿಗೆ ರಂಗೋತ್ಸವಕ್ಕೆ ಸಿದ್ಧತೆ ನಡೆದಿದೆ. ಭಾರತೀಯತೆಯ ಬಗ್ಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಮಹಾಪುರುಷರ ಪರಿಚಯ ಮಾಡಿಕೊಡುವುದು. ರಾಷ್ಟ್ರಪ್ರೇಮದ ಪಾಂಚಜನ್ಯ ಮೊಳಗಿಸುವುದು ಇದರ ಉದ್ದೇಶ ಎಂದು ಮೈಸೂರಿನಲ್ಲಿ ರಂಗಾಯಣ ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಮಾಹಿತಿ ನೀಡಿದರು.