ಹನೂರು: ತಾಲೂಕಿನ ಮಾಲಿಂಗನತ್ತ ಗ್ರಾಮಕ್ಕೆ ನಿರಂತರ ಜ್ಯೋತಿ ಯೋಜನೆಯಡಿ ಸಮರ್ಪಕ ವಿದ್ಯುತ್ ಸರಬರಾಜು ಮಾಡುವಂತೆ ಗ್ರಾಮಸ್ಥರು ಸೋಮವಾರ ಬೆಳಗ್ಗೆ ಪ್ರತಿಭಟನೆ ನಡೆಸಿರುವ ಘಟನೆ ಜರುಗಿದೆ.
ಹನೂರು ತಾಲೂಕಿನ ಲೊಕ್ಕನಹಳ್ಳಿ ಹೋಬಳಿಯ ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಮಾಲಿಂಗನತ್ತ ಗ್ರಾಮದಲ್ಲಿ ಸುಮಾರು 60 ಕುಟುಂಬಗಳಿದ್ದು 250 ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ.
ಲೊಕ್ಕನಹಳ್ಳಿ ಹೋಬಳಿಯ ಎಲ್ಲಾ ಗ್ರಾಮಗಳಿಗೆ ನಿರಂತರ ಜ್ಯೋತಿ ಯೋಜನೆಯಡಿ ನಿರಂತರ ವಿದ್ಯುತ್ ನೀಡಲು ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಪಿಜಿ ಪಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಗುಡಿ, ನಲ್ಲಿಮರದ ದೊಡ್ಡಿ, ಹಾವಿನ ಮೂಲೆ ಸೇರಿದಂತೆ ಮಾಲಿಂಗನತ್ತ ಗ್ರಾಮದ ನಿವಾಸಿಗಳು ನಿರಂತರ ವಿದ್ಯುತ್ ಯೋಜನೆಯಿಂದ ವಂಚಿತರಾಗಿದ್ದಾರೆ. ಈ ಗ್ರಾಮಗಳ ಮುಖಾಂತರವೇ ಇತರೆ ಗ್ರಾಮಗಳಿಗೆ ನಿರಂತರ ಯೋಜನೆ ಯಡಿ ವಿದ್ಯುತ್ ಪೂರೈಕೆಯಾಗುತ್ತಿದೆ ಆದರೆ ಈ ಗ್ರಾಮಗಳಿಗೆ ಸಂಪರ್ಕ ನೀಡದೆ ಮುಂದಿನ ಗ್ರಾಮಗಳಿಗೆ ವಿದ್ಯುತ್ ನೀಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ .
ಗ್ರಾಮದ ನಿವಾಸಿ ಸೆಂದಿಲ್ ಕುಮಾರ್ ಮಾತನಾಡಿ ನಮ್ಮ ಗ್ರಾಮಕ್ಕೆ ನಿರಂತರ ಜ್ಯೋತಿ ಯೋಜನೆಯಡಿ ವಿದ್ಯುತ್ ಸಮರ್ಪಕವಾಗಿ ಪೂರೈಕೆ ಮಾಡದೇ ಇರುವುದರಿಂದ ವಿದ್ಯಾರ್ಥಿಗಳು ಸೇರಿದಂತೆ ಮಹಿಳೆಯರಿಗೆ ತುಂಬಾ ತೊಂದರೆಯಾಗಿದೆ. ದಿನದ 24 ಗಂಟೆಯಲ್ಲಿ ಕೇವಲ ಏಳು ಗಂಟೆ ಮಾತ್ರ ವಿದ್ಯುತ್ ಪೂರೈಕೆ ಮಾಡುತ್ತಿದ್ದಾರೆ. ಗಾಳಿ ಮಳೆ ಹಾಗೂ ಇನ್ನಿತರ ತುರ್ತು ಸಂದರ್ಭಗಳಲ್ಲಿ ವಿದ್ಯುತ್ ಪೂರೈಕೆ ಯಾಗದೆ ವಿದ್ಯಾರ್ಥಿಗಳ ಓದಿಗೆ ತೀವ್ರ ತೊಂದರೆ ಆಗಿದೆ. ಕೆಲವೊಮ್ಮೆ ಕುಡಿಯುವ ನೀರಿಗೂ ಅಹಂಕಾರ ಉಂಟಾಗಿದೆ ಸಂಬಂಧ ಪಟ್ಟ ಸೆಸ್ಕಾಂ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ವಿದ್ಯಾರ್ಥಿ ಜಡೆ ಸ್ವಾಮಿ ಮಾತನಾಡಿ ಗ್ರಾಮದಲ್ಲಿ ವಿದ್ಯುತ್ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ ಇದರಿಂದ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆ ಆಗಿದೆ ದಯವಿಟ್ಟು ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಲೋಕನಹಳ್ಳಿ ಹೋಬಳಿಯ ಎಲ್ಲಾ ಗ್ರಾಮಗಳಿಗೆ ನಿರಂತರ ವಿದ್ಯುತ್ ಯೋಜನೆ ಯಡಿ ವಿದ್ಯುತ್ ಪೂರೈಸಲು ಡಿಪಿಆರ್ ಸಿದ್ದಪಡಿಸಿ ಅನುಮೋದನೆಗಾಗಿ ಕಳುಹಿಸಲಾಗಿದೆ. ಟೆಂಡರ್ ಮುಗಿದ ನಂತರ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಎಂದು ಸೆಸ್ಕಾಂ ಎಇಇ ಶಂಕರ್ ಆಂದೋಲನ ಟಿವಿಗೆ ಮಾಹಿತಿ ನೀಡಿದ್ದಾರೆ.