ಚಾಮರಾಜನಗರ: ಜಮೀನಿನಲ್ಲಿ ಕಳಚಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಆಕಸ್ಮಿಕವಾಗಿ ತುಳಿದು ರೈತ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಚಂದಕವಾಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಾಗರಾಜು(55) ಮೃತಪಟ್ಟ ರೈತ.
ಎಂದಿನಂತೆ ಜಮೀನಿಗೆ ಹೋಗಿದ್ದರು. ಸೋಮವಾರ ರಾತ್ರಿ 7.45ಗಂಟೆಯಾದರೂ ಮನೆಗೆ ವಾಪಸ್ಸಾಗಿರಲಿಲ್ಲ. ಅನುಮಾನಗೊಂಡು ಅವರ ಅಳಿಯ ಜಮೀನಿಗೆ ಹೋಗಿ ನೋಡಿದಾಗ ರಾತ್ರಿ 8.30ರಲ್ಲಿ ಸತ್ತಿರುವ ವಿಚಾರ ಗೊತ್ತಾಗಿದೆ.
ಜಮೀನಿನ ಮೂಲಕ ಹಾದು ಹೋಗಿರುವ ಸೆಕೆಂಡರಿ ಲೈನ್ ಕಳಚಿ ಬಿದ್ದಿದ್ದು ಅದನ್ನು ನೋಡದೆ ಕಾಲಿಟ್ಟು ಸಾವನ್ನಪ್ಪಿದ್ದಾರೆ.ಘಟನಾ ಸ್ಥಳಕ್ಕೆ ಸೆಸ್ಕ್ ಎಇಇ ಶಶಿಧರ್, ಶಾಖಾಧಿಕಾರಿ ಮರಿಸ್ವಾಮಿ ಮೊದಲಾದವರು ಭೇಟಿ ನೀಡಿದ್ದರು. ಇಲಾಖೆ ನಿಯಮಾನುಸಾರ ಮೃತರ ಕುಟುಂಬಕ್ಕೆ 5ಲಕ್ಷ ರೂ.ಪರಿಹಾರ ನೀಡಲು ಅವಕಾಶವಿದ್ದು ಇಷ್ಟರಲ್ಲಿಯೇ ನೀಡುವುದಾಗಿ ಹಿರಿಯ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.





