ಭಾರತೀನಗರ: ದೊಡ್ಡರಸಿನಕೆರೆಯಲ್ಲಿ ನಡೆದಿದ್ದ ರೌಡಿಶೀಟರ್ ಅರುಣಾ ಕೊಲೆ ಪ್ರಕರಣ ಮಾಹಿತಿ ಕಲೆಹಾಕದೆ ಕರ್ತವ್ಯಲೋಪವೆಸಗಿದ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯ ಪೇದೆ ಎಲ್.ಆರ್.ಚೇತನ್‌ನನ್ನು ಅಮಾನತು ಮಾಡಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಆದೇಶ ಹೊರಡಿಸಿದ್ದಾರೆ.
ಮುಟ್ಟನಹಳ್ಳಿ, ದೊಡ್ಡರಸಿನಕೆರೆ, ಚಿಕ್ಕಮರೀಗೌಡನದೊಡ್ಡಿ ಅಸುಪಾಸಿನ ಗ್ರಾಮಗಳಲ್ಲಿ ಎನ್.ಆರ್.ಚೇತನ್ (ಪಿಸಿ ನಂಬರ್ ೩೦೮) ಬೀಟ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ರೌಡಿ ಶೀಟರ್ ಅರುಣಾ ಕೊಲೆಗೂ ಮುನ್ನ ನಡೆದ ಗುಂಪು ಘರ್ಷಣೆ ವೇಳೆ ಮುಂಜಾಗ್ರತಾ ಕ್ರಮವಾಗಿ ಮಾಹಿತಿ ಕಲೆಹಾಕದೆ ಕರ್ತವ್ಯ ಲೋಪ ಮಾಡಿರುವ ಹಿನ್ನೆಲೆಯಲ್ಲಿ ಚೇತನ್‌ನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಕಳೆದ ೩ ವರ್ಷಗಳ ಹಿಂದೆ ಪೇದೆಯಾಗಿ ನೇಮಕವಾಗಿದ್ದ ಚೇತನ್ ಬೀಟ್ ಕರ್ತವ್ಯದ ಜೊತೆಗೆ ಠಾಣಾ ವ್ಯಾಪ್ತಿಯಲ್ಲಿ ಶಿಂಷಾನದಿ ದಂಡೆಯಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿ ನಡೆಯುತ್ತಿದ್ದ ಅಕ್ರಮ ಮರಳು ದಂಧೆ, ಜೂಜಾಟ, ಮದ್ಯಂಗಡಿಗಳು ಹಾಗೂ ವೆಶ್ಯಾವಾಟಿಕೆ ಮತ್ತಿತರ ಕಾನೂನು ಬಾಹಿರ ಚಟುವಟಿಕೆಗಳ ದಂಧೆ ನಡೆಸುವವರಿಂದ ಹಣ ವಸೂಲಿ ಮಾಡಿ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ತಲುಪಿಸುತ್ತಿದ್ದ ಕಾರ್ಯವನ್ನು ಸಹ ಚೇತನ್ ಮಾಡುತ್ತಿದ್ದ ಎಂದು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಅಮಾನತುಗೊಳಿಸಲಾಗಿದೆ.