Mysore
22
broken clouds

Social Media

ಸೋಮವಾರ, 13 ಜನವರಿ 2025
Light
Dark

ಸ್ವಂತ ಜಮೀನಿನಲ್ಲಿ ನಡೆದ ಸಿದ್ದು ಸಹೋದರ ರಾಮೇಗೌಡರ ಅಂತ್ಯಕ್ರಿಯೆ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಿರಿಯ ಸಹೋದರ ರಾಮೇಗೌಡ ಅವರ ಅಂತ್ಯಕ್ರಿಯೆಯು ಶನಿವಾರ ಸಿದ್ದರಾಮನಹುಂಡಿ ಪಕ್ಕದ ಹೊಸಹಳ್ಳಿ ಬಳಿ ಇರುವ ಜಮೀನಿನಲ್ಲಿ ನೆರವೇರಿತು. ಸಿದ್ದರಾಮಯ್ಯ ಅವರ ತಂದೆ, ತಾಯಿ, ಅಣ್ಣನ ಸಮಾಧಿ ಬಳಿಯೇ ಕಿರಿಯ ತಮ್ಮನ ಪಾರ್ಥೀವ ಶರೀರವನ್ನು ಮಣ್ಣು ಮಾಡಲಾಯಿತು.

ತೀವ್ರ ಅನಾರೋಗ್ಯದಿಂದ ರಾಮೇಗೌಡ ಶುಕ್ರವಾರ ರಾತ್ರಿ ಮೃತಪಟ್ಟಿದ್ದರು. ಬೆಳಿಗ್ಗೆಯೇ ಬೆಂಗಳೂರಿನಿಂದ ಹೊರಟು ಸಿದ್ದರಾಮನಹುಂಡಿಗೆ ಬಂದ ಮಾಜಿ ಸಿಎಂ ಸಿದ್ದರಾಮಯ್ಯ, ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಪಾರ್ಥೀವ ಶರೀರದ ದರ್ಶನ ಪಡೆದರು. ಬಳಿಕ ಚಿಕ್ಕಪ್ಪನ ಪಾರ್ಥೀವ ಶರೀರಕ್ಕೆ ಹೆಗಲು ಕೊಟ್ಟ ಶಾಸಕ ಡಾ. ಯತೀಂದ್ರ ಭಾವುಕರಾದರು.

ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಶಾಸಕರಾದ ಜಿ.ಟಿ.ದೇವೇಗೌಡ, ಎಚ್.ಪಿ.ಮಂಜುನಾಥ್, ಅನಿಲ್ ಚಿಕ್ಕಮಾದು, ಎಂ.ಅಶ್ವಿನ್‌ಕುಮಾರ್, ಡಾ.ಡಿ.ತಿಮ್ಮಯ್ಯ, ಮಾಜಿ ಶಾಸಕ ಕೆ.ವೆಂಕಟೇಶ್, ಎಂ.ಕೆ.ಸೋಮಶೇಖರ್, ಎಸ್.ಬಾಲರಾಜ್, ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಬಿ.ಎಂ.ರಾಮು, ಬೀರಿಹುಂಡಿ ಬಸವಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜು, ಮಾಜಿ ಮೇಯರ್ ಪುರುಷೋತ್ತಮ್, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ಕಾಂಗ್ರೆಸ್ ಮುಖಂಡ ಡಿ.ರವಿಶಂಕರ್, ಡಿಸಿಸಿ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ಕೆಪಿಸಿಸಿವಕ್ತಾರ ಎಂ.ಲಕ್ಷ್ಮಣ್, ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಂ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ಪುಷ್ಪ ಅಮರನಾಥ್, ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕವೀಶ್ ಗೌಡ, ಜಿಲ್ಲಾ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಸದಾನಂದ, ಜೆಎಸ್‌ಎಸ್ ಮಹಾವಿದ್ಯಾಪೀಠದ ಎಸ್.ಪಿ.ಮಂಜುನಾಥಸ್ವಾಮಿ, ಕೆಪಿಎಸ್‌ಸಿ ಮಾಜಿ ಸದಸ್ಯರಾದ ಷಡಕ್ಷರಿ, ಬ್ರಾಡ್‌ವೇ ಕಿರಣ್, ಹಿನಕಲ್ ಪ್ರಕಾಶ್, ಮಾರ್ಬಳ್ಳಿ ಕುಮಾರ್, ಜೆ.ಜೆ.ಆನಂದ, ಮಾವಿನಹಳ್ಳಿ ಸಿದ್ದೇಗೌಡ, ಮಾದೇಗೌಡ, ಟಿ.ಬಿ.ಚಿಕ್ಕಣ್ಣ, ಎಸ್.ಆರ್.ರವಿ ಸೇರಿದಂತೆ ಸುಮಾರು ೬ ಸಾವಿರಕ್ಕೂ ಅಧಿಕ ಮಂದಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ನನ್ನ ಪ್ರೀತಿಯ ತಮ್ಮ ರಾಮೇಗೌಡ : ಸಿದ್ದರಾಮಯ್ಯ ಭಾವುಕ

ನನ್ನ ಪ್ರೀತಿಯ ತಮ್ಮ ರಾಮೇಗೌಡ. ಅವನು ಯಾವಾಗಲೂ ‘ನೀನು ಮುಖ್ಯಮಂತ್ರಿ ಆಗಿದ್ದೀಯ, ಹಂಗೆ ಚೆನ್ನಾಗಿರುವ. ಮನೆ, ಹೊಲ, ಗದ್ದೆ ನಾನು ನೋಡಿಕೊಳ್ಳುತ್ತೇನೆ. ನೀ ಚೆನ್ನಾಗಿರು ಅಷ್ಟೇ ಸಾಕು’ ಅನ್ನುತ್ತಿದ್ದ ಎಲ್ಲ ಕೆಲಸನೂ ಅವನೇ ಮಾಡುತ್ತಿದ್ದೆ. ಪ್ರೀತಿಯ ಸಹೋದರ. ನಮ್ಮಣ್ಣ ಚೆನ್ನಾಗಿರಲಿ ಅಂತ ಭಾವಿಸುತ್ತಿದ್ದ. ಅವನಾಯಿತು, ಗದ್ದೆ ಆಯಿತು, ಮನೆ ಆಯಿತು, ಬೇಸಾಯ ಆಯಿತು ಅಷ್ಟೆ. ಎಂದೂ ನನ್ನ ರಾಜಕೀಯಕ್ಕೆ ತೊಂದರೆ ಕೊಡಲಿಲ್ಲ. ಬೆನ್ನಲುಬಾಗಿ ನಿಂತ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸಹೋದರನ ಜತೆಗಿನದ್ದ ಒಡನಾಟ ನೆನೆದು ಕಣ್ಣೀರಾದರು.

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ