ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಧಿಕಾರದ(ಮುಡಾ) ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದ್ದು, ಮುಡಾ ಮಾಜಿ ಅಧ್ಯಕ್ಷ ಒಂದೇ ದಿನದಲ್ಲಿ ಸುಮಾರು 800 ಕ್ಕೂ ಹೆಚ್ಚು ಸೈಟುಗಳಿಗೆ ಕಾನೂನು ಬಾಹಿರವಾಗಿ ಖಾತೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯ ಈ ವಿಚಾರವಾಗಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಳ್, ಮೂಡ ಅಕ್ರಮ ಬಗೆದಷ್ಟು ಹೊರಬರುತ್ತಿದೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಒಂದೇ ದಿನದಲ್ಲಿ ಸುಮಾರು 800ಕ್ಕೂ ಹೆಚ್ಚು ಸೈಟುಗಳಿಗೆ ಕಾನೂನು ಬಾಹಿರವಾಗಿ ಖಾತೆ ಮಾಡಿರುವುದು ಲೋಕಾಯುಕ್ತ ಪೊಲೀಸರಿಗೆ ಇನ್ನು ಕಿವಿಗೆ ಕೇಳಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಲೋಕಾಯುಕ್ತ ಪೊಲೀಸರು ಕಾಂಗ್ರೆಸ್ ಸರಕಾರದ ಕಾವಲು ಪಡೆಯಂತೆ ವರ್ತಿಸುತ್ತಿರುವುದು ಆಘಾತಕಾರಿ ವಿಷಯವಾಗಿದೆ. ಲೋಕಾಯುಕ್ತ ಪೊಲೀಸರು ಇಂತಹ ಗಂಭೀರ ವಿಷಯಗಳ ತನಿಖೆಯನ್ನು ನಡೆಸಲಾಗದಾಗ, ಲೋಕಾಯುಕ್ತವನ್ನು ವಿಸರ್ಜಿಸುವುದು ಒಳ್ಳೆಯದು ಎಂದು ಕಿಡಿಕಾರಿದ್ದಾರೆ.