ಮೈಸೂರು : ಸಾಂಸ್ಕೃತಿಕ ನಗರಕ್ಕೆ ಕೊಡುಗೆ ನೀಡಿದ ಕುಟುಂಬಕ್ಕೆ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಯದುವೀರ್ ಅವರನ್ನುಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಜೆಡಿಎಸ್ ಮಾಜಿ ಶಾಸಕ ಸಾರಾ ಮಹೇಶ್ ಅಭಿಪ್ರಾಯಪಟ್ಟರು.
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ದ ಮೈತ್ರಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾ ಒಡೆಯರ್ ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿ ಮಾತನಾಡಿದ ಅವರು, ಮೈಸೂರು ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ರಾಜಮನೆತನದ ಕೊಡುಗೆ ಅಪಾರವಾದ್ದು. ಯದುವೀರ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಆ ಕುಟುಂಬಕ್ಕೆ ಕೊಡುಗೆ ನೀಡುವ ಉದ್ದೇಶವನ್ನು ಎರಡೂ ಪಕ್ಷದ ಹಿರಿಯ ನಾಯಕರು ಹೊಂದಿದ್ದಾರೆ ಎಂದರು.
ಚುನಾವಣೆಯಲ್ಲಿ ಈಗಾಗಲೆ ಯದುವೀರ್ ಅವರು ಜಯಗಳಿಸಿದ್ದಾರೆ. ಅಧಿಕೃತವಾಗಿ ಘೋಷಣೆಯಾಗಬೇಕಿದೆ ಅಷ್ಟೆ ಎಂದು ಅಭಿಪ್ರಾಯ ತಿಳಿಸಿದರು.
ರಾಷ್ಟ್ರ ನಾಯಕರಾದ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ನನ್ನ ನಾಯಕರಾದ ಕುಮಾರಸ್ವಾಮಿ ಅವರ ಕೈ ಬಲ ಪಡಿಸಲು ನಿಮ್ಮ ಜೊತೆ ಹೆಗಲಿಗೆ ಹೆಗಲು ಕೊಟ್ಟು, ಹಗಲು ರಾತ್ರಿ ಕೆಲಸ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.