ಮೈಸೂರು : ಚಾಮುಂಡೇಶ್ವರಿ ದೇವಿಯ ವರ್ಧಂತಿ ಮಹೋತ್ಸವದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಇರುವ ಚಾಮುಂಡೇಶ್ವರಿ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಆಷಾಢ ಮಾಸದ ಕೃಷ್ಣಪಕ್ಷ ಅಷ್ಠಮಿ ರೇವತಿ ನಕ್ಷತ್ರದ ದಿನದಂದು ಚಾಮುಂಡೇಶ್ವರಿ ವರ್ಧಂತಿ ಆಚರಿಸಲಾಗುತ್ತಿದ್ದು, ಅದರಂತೆ ಗುರುವಾರ ನಗರದಲ್ಲಿ ವರ್ಧಂತಿಯ ಸಂಭ್ರಮ ಮನೆ ಮಾಡಿತ್ತು. ನಗರದ ವಿವಿಧೆಡೆ ಗಳಲ್ಲಿರುವ ಚಾಮುಂಡೇಶ್ವರಿ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು.
ಕೆ.ಜಿ.ಕೊಪ್ಪಲಿನಲ್ಲಿರುವ ಚಾಮುಂಡೇಶ್ವರಿ ದೇಗುಲದಲ್ಲಿ ಬೆಳಗಿನಿಂದಲೇ ವಿಶೇಷ ಪೂಜಾ ಕೈಂಕರ್ಯಗಳನ್ನು ನಡೆಸಲಾಯಿತು. ವಿವಿಧ ಹೂವುಗಳಿಂದ ದೇವಸ್ಥಾನವನ್ನು ಅಲಂಕರಿಸಿದ್ದು, ಸಾರ್ವಜನಿಕರ ಕಣ್ಮನ ಸೆಳೆಯಿತು. ದೇವಸ್ಥಾನಕ್ಕೆ ಬಂದ ಭಕ್ತರು ಸರದಿ ಸಾಲಿನಲ್ಲಿ ನಿಂತು ಚಾಮುಂಡೇಶ್ವರಿ ದರ್ಶನ ಪಡೆದರು.
ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನ, ಎಂ.ಜಿ.ರಸ್ತೆಯಲ್ಲಿರುವ ಚಾಮುಂಡೇಶ್ವರಿ ದೇವಾಲಯ, ವಿದ್ಯಾರಣ್ಯಪುರಂನ ಚಾಮುಂಡಿವನ, ಸೂರ್ಯಬೇಕರಿ ಬಳಿ ಇರುವ ಚಾಮುಂಡೇಶ್ವರಿ ದೇವಸ್ಥಾನ ಸೇರಿದಂತೆ ನಗರದ ಹಲವೆಡೆ ಇರುವ ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ನಗರದ ಹಲವೆಡೆ ಪ್ರಸಾದ ವಿತರಣೆ:
ಚಾಮುಂಡೇಶ್ವರಿಯ ವರ್ಧಂತಿ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ, ವೃತ್ತಗಳಲ್ಲಿ ಚಾಮುಂಡೇಶ್ವರಿ ದೇವಿಯ ಭಾವಚಿತ್ರವಿರಿಸಿ ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಪ್ರಸಾದ ವಿತರಿಸಲಾಯಿತು. ದೇವರಾಜ ಮೊಹಲ್ಲಾದ ಶ್ರೀ ರಾಮಮಂದಿರದ ಮುಂಭಾಗ, ಅಗ್ರಹಾರ ವೃತ್ತ, ಚಾಮುಂಡಿಪುರಂ, ಕುವೆಂಪುನಗರ, ಒಂಟಿಕೊಪ್ಪಲು, ಆರ್‌ಟಿಒ ವೃತ್ತ, ವಿದ್ಯಾರಣ್ಯಪುರಂ, ಸಿದ್ಧಾರ್ಥನಗರ, ಬಸವೇಶ್ವರ ರಸ್ತೆ, ರಾಮಸ್ವಾಮಿ ವೃತ್ತದ ಬಳಿ ಸೇರಿದಂತೆ ಹಲವೆಡೆ ಪ್ರಸಾದ ವಿತರಿಸಲಾಯಿತು.



