ಹುಣಸೂರು: ಟ್ರಾಕ್ಟರ್‌ನಲ್ಲಿ ಜಮೀನು ಉಳುಮೆ ಮಾಡುತ್ತಿದ್ದ ಚಾಲಕನ ಹುಲಿಗಳ ದಾಳಿಯಿಂದ ಬಚಾವಾಗಿರುವ ಘಟನೆ ತಾಲ್ಲೂಕಿನ ಹನಗೋಡು ಹೋಬಳಿಯ ನೇಗತ್ತೂರು ಗ್ರಾಮದಲ್ಲಿ ನಡೆದಿದೆ.
ಸಿಂಡೇನಹಳ್ಳಿಯ ಟ್ರಾಕ್ಟರ್ ಚಾಲಕ ವರ್ಷಿತ್ ಗೌಡ ಹುಲಿ ಬಾಯಿಂದ ಬಚಾವಾದ ಯುವ ರೈತ. ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಂಚಿನನೇಗತ್ತೂರಿನ ಜಮೀರ್ ಎಂಬವರ ಜಮೀನಿನಲ್ಲಿ ಟ್ರಾಕ್ಟರ್ ಮೂಲಕ ಉಳುಮೆ ಮಾಡುತ್ತಿದ್ದರು. ಮಧ್ಯಾಹ್ನ ೨ಗಂಟೆ ವೇಳೆಯಲ್ಲಿ ಒಮ್ಮೆಲೆ ಎರಡು ಹುಲಿಗಳು ಕಾಣಿಸಿಕೊಂಡು ಟ್ರಾಕ್ಟರ್ ಮೇಲೆ ಹಾರಿವೆ. ಹುಲಿಗಳನ್ನು ಕಂಡ ವರ್ಷಿತ್ಗೌಡ ಜೋರಾಗಿ ಕೂಗಾಡುತ್ತಾ ಟ್ರಾಕ್ಟರನ್ನು ಅಡ್ಡಾದಿಡ್ಡಿಯಾಗಿ ಓಡಿಸಿದ್ದರಿಂದ ಗಾಬರಿಗೊಂಡ ಹುಲಿಗಳು ಜಮೀನಿನಲ್ಲೇ ಮೇಯುತ್ತಿದ್ದ ಹಸುವಿನ ಮೇಲೆರೆಗಿವೆ. ಜಾಗೃತನಾದ ವರ್ಷಿತ್ ಗೌಡ ಟ್ರಾಕ್ಟರನ್ನು ಹುಲಿಗಳತ್ತ ಓಡಿಸಿಕೊಂಡು ಹೋಗಿದ್ದರಿಂದ ಹೆದರಿದ ಹುಲಿಗಳು ಪಕ್ಕದ ಕಾಡಿನತ್ತ ಓಡಿ ಹೋಗಿವೆ.
ಅಡ್ಡಾದಿಡ್ಡಿಯಾಗಿ ಟ್ರಾಕ್ಟರ್ ಓಡಿಸುತ್ತಾ ಹುಲಿ ಹುಲಿ ಎಂದು ಕೂಗಾಡುತ್ತಿದ್ದುದ್ದನ್ನು ಕೇಳಿಸಿಕೊಂಡ ಅಕ್ಕಪಕ್ಕದ ಜಮೀನಿನ ರೈತರು ಜೋರಾಗಿ ಕೂಗಾಡುತ್ತಾ ಓಡಿ ಬಂದಾಗ ಹುಲಿಗಳು ದಾಳಿ ನಡೆಸಲು ಬಂದ ವಿಷಯ ತಿಳಿಸಿದ್ದಾರೆ.
ಇದನ್ನೂ ಓದಿ:-ಓದುಗರ ಪತ್ರ: ಕಸದ ರಾಶಿ ತೆರವುಗೊಳಿಸಿ
ಹಸುವಿನ ಕುತ್ತಿಗೆ ಭಾಗ ಗಾಯವಾಗಿದ್ದನ್ನು ಕಂಡು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದರೂ ತಕ್ಷಣಕ್ಕೆ ಯಾರೂ ಬರಲಿಲ್ಲ. ಹುಣಸೂರು ಅರಣ್ಯ ಇಲಾಖೆಗೆ ಹುಲಿ ಕಾಣಿಸಿಕೊಂಡ ಬಗ್ಗೆ ತಿಳಿಸಿದರೂಸಿಬ್ಬಂದಿ ಕಳುಹಿಸುತ್ತೇವೆಂದರು. ಸಂಜೆ ೪ಗಂಟೆ ವೇಳೆಗೆ ಇಬ್ಬರು ಗಾರ್ಡ್‌ಗಳು ಬಂದಿದ್ದನ್ನು ಕಂಡ ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದುಕೊಂಡು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಹುಲಿಯನ್ನು ಸೆರೆ ಹಿಡಿಯಬೇಕು, ಸ್ಥಳಕ್ಕೆ ಚುನಾಯಿತ ಪ್ರತಿನಿಧಿಗಳು ಹಾಗೂ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಸ್ಥಳಕ್ಕೆ ಭೇಟಿ ನೀಡಿದ್ದ ಆರ್‌ಎಫ್ಒ ಸುಬ್ರಹ್ಮಣ್ಯ ಅವರ ಜೀಪ್‌ಗೆ ಹುಲಿ ದಾಳಿಯಿಂದ ಗಾಯಗೊಂಡ ಹಸುವನ್ನು ಕಟ್ಟಿ ಘೇರಾವ್ ಹಾಕಿದರು.





