ಮೈಸೂರು : ಹಿಂದುಳಿದ ವರ್ಗಗಳ ಹಾಸ್ಟೆಲ್‌ನಲ್ಲಿ ವ್ಯಾಸಂಗ ಮಾಡಿದವರೂ ಸೇರಿದಂತೆ ಸಮಾಜದ ನೆರವು ಪಡೆದು ಉನ್ನತ ಸ್ಥಾನದಲ್ಲಿ ಇರುವವರು ಸಮಾಜರ ಋಣ ತೀರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ನಗರದ ಕೆಎಸ್‌ಒಯು ವಿ.ವಿ ಘಟಿಕೋತ್ಸವ ಭವನದಲ್ಲಿ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪ್ರಥಮ ವರ್ಷದ ವಾರ್ಷಿಕೋತ್ಸವ, ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ‘ಡಿ.ದೇವರಾಜ ಅರಸು-ಎಲ್.ಜಿ.ಹಾವನೂರು ಪ್ರಶಸ್ತಿ’ ಪ್ರದಾನ ಮಾಡಿ ಮಾತನಾಡಿದರು.
ಎಲ್.ಜಿ.ಹಾವನೂರು ಅವರು ತಮ್ಮ ವರದಿಯಲ್ಲಿ ಬಿಸಿಎಂ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡಿ ನಂತರ ಉದ್ಯೋಗ ಪಡೆದವರು ಅವರ ಆದಾಯದಲ್ಲಿ ಇಂತಿಷ್ಟು ಹಣವನ್ನು ದೇಣಿಗೆ ನೀಡಬೇಕು ಎಂದು ಹೇಳಿದ್ದನ್ನು ಪ್ರೊ.ರವಿವರ್ಮಕುಮಾರ್ ಪ್ರಸ್ತಾಪಿಸಿದ್ದಾರೆ. ಆದರೆ, ಇದನ್ನು ಎಲ್ಲರೂ ಪಾಲಿಸಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.
ಶಿಕ್ಷಣ ಎಂಬುದು ಬಹಳ ಮುಖ್ಯ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗ ಶೇ.೧೨ ರಷ್ಟು ಮಂದಿ ಮಾತ್ರ ಶಿಕ್ಷಿತರಿದ್ದರು. ಈಗ ಶೇ.೭೮ ಮಂದಿ ಶಿಕ್ಷಿತರಿದ್ದಾರೆ. ನನ್ನ ಪ್ರಕಾರ ಸಮಾಜ ಸರಿದಾರಿಯಲ್ಲಿ ಸಾಗಬೇಕಾದಲ್ಲಿ ಶೇ.೧೦೦ ರಷ್ಟು ಶಿಕ್ಷಣ ಇರಬೇಕು ಎಂದು ಹೇಳಿದರು.
ಕೇವಲ ನಾವುಗಳು ಶಿಕ್ಷಿತರಾದರೆ ಮಾತ್ರ ಸಾಲದು. ನಾವು ಪಡೆದ ಶಿಕ್ಷಣದ ಮೂಲಕ ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಶಿಕ್ಷಣ ಪಡೆದರೂ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ನುಡಿದರು.
ನಾವು ಪಡೆಯುವ ಶಿಕ್ಷಣ ವೈಚಾರಿಕತೆ ಹಾಗೂ ವೈಜ್ಞಾನಿಕವಾಗಿರಬೇಕು. ಕಂದಾಚಾರ, ಮೂಡನಂಬಿಕೆಗಳಿಂದ ದೂರವಿರಬೇಕು. ಜಾತಿ ವ್ಯವಸ್ಥೆಯನ್ನು ತೊಡೆದುಹಾಕಬೇಕು. ಈ ಮೂಲಕ ಎಲ್ಲರೂ ಸಮಸಮಾಜ ನಿರ್ಮಾಣಕ್ಕೆ ಸಂಕಲ್ಪ ತೊಡಬೇಕು ಎಂದು ಕರೆ ನೀಡಿದರು.
ಯಾವ ಧರ್ಮವೂ ಪರಸ್ಪರ ದ್ವೇಶಿಸಿ ಎಂದು ಹೇಳುವುದಿಲ್ಲ. ಎಲ್ಲಾ ಧರ್ಮಗಳು ಕೂಡ ಪ್ರೀತಿ, ಶಾಂತಿ, ಸಹಬಾಳ್ವೆಯನ್ನು ಭೋದಿಸುತ್ತವೆ. ನಾವುಗಳು ಅದರಂತೆ ನಡೆದುಕೊಳ್ಳಬೇಕು. ವಿದ್ಯಾವಂತರೇ ಜಾತಿ ವ್ಯವಸ್ಥೆಯನ್ನು ಪ್ರೋತ್ಸಹಿಸಿದಲ್ಲಿ, ಅನ್ಯರನ್ನು ದ್ವೇಷದಿಂದ ಕಂಡಲ್ಲಿ ಉತ್ತಮ ಸಮಾಜ ನಿರ್ಮಾಣ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಈ ಹಿಂದೆ ಮೈಸೂರಿನಲ್ಲಿ ಎರಡು ಬಿಸಿಎಂ ಹಾಸ್ಟಲ್‌ಗಳಿದ್ದವು. ಆದರೆ ಇಂದು ೪೫ ಹಾಸ್ಟೆಲ್‌ಗಳಿವೆ. ೬೫ ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ೩.೮೮ ಲಕ್ಷ ವಿದ್ಯಾರ್ಥಿಗಳು ಬಿಸಿಎಂ ಹಾಸ್ಟಲ್‌ಗಳಲ್ಲಿ ಕಲಿಯುತ್ತಿದ್ದಾರೆ. ಇದು ಸಂತಸದ ವಿಚಾರ ಎಂದರು.
ನಮ್ಮ ಸರ್ಕರ ಯಾವತ್ತೂ ಕೂಡ ದಲಿತ ಹಾಗೂ ಹಿಂದುಳಿದ ವಿದ್ಯಾರ್ಥಿಗಳ ಪರವಿರುತ್ತದೆ. ಬಡವರು ಹಾಗೂ ಶೋಷಿತರಿಗೆ ಆರ್ಥಿಕ ಹಾಗೂ ಸಾಮಾಜಿಕ ಶಕ್ತಿಯನ್ನು ತುಂಬಲು ಬದ್ದವಾಗಿದ್ದೇವೆ. ಡಿ.ದೇವರಾಜ ಅರಸರು ಕೂಡ ಇಂತಹುದೇ ಹಾದಿಯಲ್ಲಿ ನಡೆದು ಸಾಮಾಜಿಕ ನ್ಯಾಯದ ಹರಿಕಾರ ಎನಿಸಿಕೊಂಡರು ಎಂದರು.
ಇದನ್ನೂ ಓದಿ:-ಸಮಾಜದ ನೆರವು ಪಡೆದವರು ದೇಣಿಗೆ ನೀಡಿ ಋಣ ತೀರಿಸಿ : ಸಿಎಂ ಸಿದ್ದರಾಮಯ್ಯ
ಅಸಮಾನತೆ ಎಂಬುದನ್ನು ತೊಡೆದುಹಾಕದಿದ್ದಲ್ಲಿ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಸಾಧ್ಯವಿಲ್ಲ. ಹೀಗಾಗಿಯೇ ಎಲ್ಲರೂ ಶಿಕ್ಷಣ ಪಡೆಯಬೇಕು. ಐಎಎಸ್, ಕೆಎಎಸ್ ಅಽಕಾರಿಗಳಾದಲ್ಲಿ ನಿಮಗೆ ಯಾವುದೇ ಜಾತಿಯವರು ಕೂಡ ಹೆಣ್ಣು ಕೊಡುತ್ತಾರೆ ಎಂದು ಹೇಳಿದರು.
ಯಾರೇ ಆಗಲಿ ಸ್ವಾಭಿಮಾನವನ್ನು ಬಿಟ್ಟು ಗುಲಾಮಗಿರಿಗೆ ಇಳಿಯಬಾರದು. ಮೇಲ್ವರ್ಗದ ಜನರನ್ನು ಕಂಡಲ್ಲಿ ಸ್ವಾಮಿ, ಬುದ್ದಿ ಎನ್ನುವುದು, ಸುಶಿಕ್ಷಿತ, ಶ್ರೀಮಂತ ದಲಿತ ವ್ಯಕ್ತಿಯನ್ನು ಏಕ ವಚನದಲ್ಲಿ ಮಾತನಾಡಿಸುವುದೇ ಗುಲಾಮಗಿರಿಯ ಸಂಕೇತ ಎಂದು ಹೇಳಿದರು.
ಇಂದು ಬೆಂಗಳೂರಿಗೆ ತೆರಳಿದರೆ ನಾವು ನಮ್ಮ ರಾಜ್ಯದಲ್ಲಿ ಇದ್ದೇವೆಯೇ ಎಂದು ಪ್ರಶ್ನೆ ಮಾಡಿಕೊಳ್ಳವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಕನ್ನಡಿಗರು ನಾವು ಕನ್ನಡದಲ್ಲಿಯೇ ಮಾತನಾಡುತ್ತೇನೆ, ಕನ್ನಡದಲ್ಲಿಯೇ ವ್ಯವಹರಿಸುತ್ತೇನೆ ಎಂದು ಶಪಥ ಮಾಡಿ. ನೀವು ಯಾವ ಭಾಷೆಯನು ಬೇಕಾದರೂ ಕಲಿಯಿರಿ. ಆದರೆ, ಕನ್ನಡವನ್ನು ಗೌರವಿಸಿ, ಪ್ರೀತಿಸಿ ಎಂದು ಕರೆ ನೀಡಿದರು.
ಶಾಸಕರಾದ ಡಿ.ರವಿಶಂಕರ್, ಕೆ.ಹರೀಶ್‌ಗೌಡ, ವಿಧಾನಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಕೆ.ಶಿವಕುಮಾರ್, ಜಿಲ್ಲಾಧಿಕಾರಿ ಲಕ್ಷ್ಮಿ ಕಾಂತರೆಡ್ಡಿ, ಡಾ.ಸೋಮ ಇಳಂಗೋವನ್, ಮುಕ್ತ ವಿವಿ ಕುಲಪತಿ ಶರಣಪ್ಪ ಹಲಸೆ, ರವಿಬೋಸ್ ರಾಜ್, ಸಂಘದ ಅಧ್ಯಕ್ಷ ಬಿ.ಶಿವಸ್ವಾಮಿ, ಗೌರವಾಧ್ಯಕ್ಷ ಎಂ.ರಾಮಪ್ಪ, ಉಪಾಧ್ಯಕ್ಷ ಆರ್.ಮಹದೇವ, ಕಾರ್ಯದರ್ಶಿ ಬಿ.ಪಿ.ರಾಜೇಶ್, ಖಜಾಂಚಿ ಕೆರುಕ್ಮಾಂಗದ, ಜಂಟಿ ಕಾರ್ಯದರ್ಶಿ ಜಿ.ಕೆ.ರಮೇಶ್ ಗೌಡ ಮುಂತಾದವರು ಭಾಗವಹಿಸಿದ್ದರು.
ಹೈಕಮಾಂಡ್ ತೀರ್ಮಾನ
ವೇದಿಕೆ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಮುಂಭಾಗ ಕುಳಿತಿದ್ದ ಯುವ ಸಮೂಹ ಮುಖ್ಯಮಂತ್ರಿಯಾಗಿ ನೀವೇ ಮುಂದುವರೆಯಬೇಕು ಎಂದು ಕೂಗಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಇದು ಹೈಕಮಾಂಡ್ ತೀರ್ಮಾನ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಆಶೀರ್ವಾದವಿದ್ದರೆ ಏನೂ ಬೇಕಾದರೂ ಆಗಬಹುದು. ಇದನ್ನೆಲ್ಲಾ ಚರ್ಚಿಸಲು ಇದು ಕಾಂಗ್ರೆಸ್ ಸಮಾವೇಶ ಅಲ್ಲಿ ಸುಮ್ಮನೆ ಕೂರಪ್ಪ ಎಂದು ನಗುತ್ತಲೇ ಹೇಳಿದರು.
ನಾನಂತೂ ನೂರು ವರ್ಷ ಇರುತ್ತೇನೆ…,
ಮುಂದೆ ಕೂಡ ನೀವೇ ಮುಖ್ಯಮಂತ್ರಿ ಎಂಬ ಸಭಿಕರ ಕೂಗಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ಈಗ ನನಗೆ ೭೯ ವರ್ಷ ಆಗಿಹೋಗಿದೆ. ಆದರೂ ನಾನು ನೂರು ವರ್ಷ ಬದುಕುತ್ತೇನೆ. ಆ ವಿಶ್ವಾಸ ನನಗಿದೆ ಎಂದು ನಗೆ ಚಟಾಕಿ ಹಾರಿಸಿದರು.
ಅಮವಾಸ್ಯೆ ನಂಬುತ್ತಾರೆ…,
ಕೆಲವರು ನಾನು ಹಿಂದಿನ ಜನ್ಮದಲ್ಲಿ ಪಾಪ ಮಾಡಿದ್ದೆ. ಅದಕ್ಕೆ ಈ ಜನ್ಮದಲ್ಲಿ ಎಳಿಗೆಯಾಗುತ್ತಿಲ್ಲ ಎನ್ನುತ್ತಾರೆ. ಇದೆಲ್ಲಾ ಶುದ್ಧ ಅವಿವೇಕದ ಮಾತು. ರವಿವರ್ಮಕುಮಾರ್ ಅವರು ರಾಹುಕಾಲದಲ್ಲಿ ಮದುವೆಯಾದರು. ಅವರು ಚೆನ್ನಾಗಿಲ್ಲವೆ ಎಂದ ಅವರು, ಮರುಕ್ಷಣದಲ್ಲಿ ನನ್ನ ಪತ್ನಿ ಮಾತ್ರ ಈ ಅಮಾವಾಸ್ಯೆ ಎಲ್ಲವನ್ನೂ ನಂಬುತ್ತಾರೆ ಏನು ಮಾಡುವುದು ಎಂದು ಸ್ವತಃ ಪ್ರಶ್ನೆ ಹಾಕಿಕೊಂಡರು.





