ಮೈಸೂರು : ನಮ್ಮಲ್ಲಿ ಯಾವ ಕ್ರಾಂತಿಯೂ ಇಲ್ಲ. ಕೇವಲ ಶಾಂತಿಯಷ್ಟೇ. ವಿಪಕ್ಷಗಳು ಕಾಂಗ್ರೆಸ್ ಬೆಳವಣಿಗೆ ಬಗ್ಗೆ ಸಹಿಸದೆ ಹತಾಶೆಯಿಂದ ಕೆಲವು ಮಾತುಗಳನ್ನಾಡಿ ಕಾಲ ಕಳೆಯುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರ ಸ್ವಾಮಿ ತಿಳಿಸಿದರು.
ನವೆಂಬರ್ ಕ್ರಾಂತಿ ಕುರಿತು ಪ್ರತಿಕ್ರಿಯಿಸಿದ ಅವರು, ಯಾರನ್ನು ಸಚಿವರಾಗಿ ಮಾಡಬೇಕು ಎಂಬುದೆಲ್ಲಾ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಜತೆಗೆ ನಾನೇನು ಸನ್ಯಾಸಿ ಅಲ್ಲ. ಪಕ್ಷ ಯಾವಾಗ ಜವಾಬ್ದಾರಿ ಕೊಡಬೇಕೋ ಆಗ ಕೊಡುತ್ತದೆ ಎಂದು ಹೇಳಿದರು.
ಇದನ್ನೂ ಓದಿ:-ಮೈಸೂರು | ಬಾಲಕಿ ಅತ್ಯಾಚಾರ, ಕೊಲೆ ಆರೋಪಿಗೆ ನ್ಯಾಯಾಂಗ ಬಂಧನ
ಅಧಿಕಾರ ಹಂಚಿಕೆ ಒಪ್ಪಂದದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಸಾರ್ವಜನಿಕವಾಗಿ ಚರ್ಚೆ ಯಾಗುವ ವಿಚಾರವಲ್ಲ. ಜ್ಞಾನ ಕಡಿಮೆ ಇರುವವರು ಅದನ್ನು ಮಾತನಾಡುತ್ತಾರೆ. ಕಾಂಗ್ರೆಸ್ ಶಾಸಕರಾಗಿ ರಲಿ, ವಿರೋಧ ಪಕ್ಷದವರೇ ಆಗಿರಲಿ ಮಾಹಿತಿ ಕೊರತೆಯಿಂದ ಅದನ್ನೆಲ್ಲಾ ಮಾತನಾಡುತ್ತಾರೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಾವೆಲ್ಲಾ ಉತ್ತಮವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ಅಹಿಂದ ಚಳವಳಿಯನ್ನು ಸಿದ್ದರಾಮಯ್ಯ ನಂತರ ಸತೀಶ್ ಜಾರಕಿಹೊಳಿ ಮುಂದುವರಿಸಲಿ ಎಂಬ ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಕೂಡ ಅಹಿಂದ ಚಳವಳಿಯ ಭಾಗವಾಗಿದ್ದು, ಕಾಂಗ್ರೆಸ್ ಸಿದ್ಧಾಂತವೇ ಅಹಿಂದ ಸಿದ್ಧಾಂತವಾಗಿದೆ. ಸಿದ್ದರಾಮಯ್ಯನವರ ನಂತರ ಚಳವಳಿಯನ್ನು ಒಬ್ಬರು ಮುಂದುವರಿಸಬೇಕು ತಾನೇ. ಸತೀಶ್ ಜಾರಕಿಹೊಳಿ ಸಿದ್ದರಾಮಯ್ಯ ಅವರ ಜತೆ ಸುದೀರ್ಘವಾಗಿ ಇದ್ದವರು. ಅವರೇ ಚಳವಳಿ ಮುಂದುವರಿಸಲಿ ಎಂಬುದು ನಮ್ಮ ಮನವಿಯೂ ಆಗಿದೆ ಎಂದರು.





