ಮೈಸೂರು: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಇದೆಲ್ಲಾ ಕೇವಲ ಊಹಾಪೋಹ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತದೆ ಎಂಬುದು ಬರೀ ಚರ್ಚೆ ಅಷ್ಟೇ. ಒಳಗಡೆ ಏನೂ ಆಗಲ್ಲ. ಇದು ಬರೀ ಮಾಧ್ಯಮಗಳಲ್ಲಿ ಪ್ರಚಾರ ಆಗುತ್ತಿದೆ. ಇದನ್ನು ನೋಡಿಕೊಂಡು ಕೆಲವರು ಹೇಳುತ್ತಾರೆ. ನಮ್ಮ ಪಕ್ಷದಲ್ಲಿ ಈ ವಿಷಯಗಳ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.
ಇನ್ನು ಸಿಎಂ ರೇಸ್‌ನಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾನು ಸಿಎಂ ರೇಸ್‌ನಿಂದ ಹಿಂದೆ ಸರಿದಿದ್ದೇನೆ. ಹಿಂದೆ ಸರಿದು ಒಂದು ವರ್ಷವೇ ಆಗೋಗಿದೆ ಎಂದು ನಗುತ್ತಾ ಉತ್ತರ ನೀಡಿ ಜಾರಿಕೊಂಡರು.
ಇನ್ನು ದಲಿತ ಸಿಎಂ ಕೂಗು ಕೇಳಿ ಬರುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನಾವು ಡಿನ್ನರ್ ಸಭೆಯಲ್ಲಿ ಏನು ಚರ್ಚೆ ನಡೆಸಿಲ್ಲ. ಸಿಎಂ ಡಿನ್ನರ್‌ಗೆ ಕರೆದಿದ್ದರು ನಾವು ಹೋಗಿದ್ದೆವು ಅಷ್ಟೇ ಎಂದು ಡಿನ್ನರ್ ಸಭೆಯ ಗುಟ್ಟು ಬಿಟ್ಟು ಕೊಡದೇ ಹೊರಟರು.





