ಮೈಸೂರು : ಅನುಮಾನಾಸ್ಪದ ರೀತಿಯಲ್ಲಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಕಲ್ಲಹಟ್ಟಿ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ. ಚರಣ್ (7) ಮೃತ ಬಾಲಕ.
ಪೋಷಕರೊಂದಿಗೆ ಜಮೀನಿಗೆ ಆಗಮಿಸಿದ್ದ ಬಾಲಕ ಮರದ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದ. ಕೆಲಹೊತ್ತಲ್ಲೇ ಆತ ವಿಶ್ರಾಂತಿ ಪಡೆಯುತ್ತಿದ್ದ ಸ್ಥಳದಿಂದ ಕಿರುಚಾಟದ ಸದ್ದು ಕೇಳಿ ಬಂದಿತ್ತು. ತಕ್ಷಣ ಹೋಗಿ ನೋಡುವಷ್ಟರಲ್ಲಿ ಬಾಲಕ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.
ಮುಖವೆಲ್ಲ ಪರಚಿದಂತ ಹಾಗೂ ಒಂದು ಕಾಲನ್ನು ಯಾವುದೋ ಪ್ರಾಣಿ ತಿಂದು ಅರ್ಧ ಬಿಟ್ಟುಹೋದ ರೀತಿಯಲ್ಲಿ ಪತ್ತೆಯಾಗಿದೆ. ಬಾಲಕನ ಮೃತದೇಹವೆಲ್ಲ ರಕ್ತಸಿಕ್ತವಾಗಿರುವುದರಿಂದ ಹುಲಿಯೇ ದಾಳಿ ನಡೆಸಿದೆ ಎಂದು ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಸ್ಥಳೀಯರು ಕೂಡ ಈ ಬಗ್ಗೆ ಅನುಮಾನ ಹೊರಹಾಕಿದ್ದಾರೆ. ಬಿಸಿಲು ಇದ್ದುದ್ದರಿಂದ ಮರದ ಕೆಳಗೆ ಕೂರುವಂತೆ ಹೇಳಿದ್ದೆ. ಅಲ್ಲದೇ ಎಲ್ಲಿಯೂ ಹೋಗದಂತೆ ಹೇಳಿ ನಾವು ನಮ್ಮ ಕೆಲಸದಲ್ಲಿ ನಿರತರಾಗಿದ್ದೆವು. ಕೆಲ ಹೊತ್ತಿನಲ್ಲೇ ಆತನಿದ್ದ ಸ್ಥಳದಿಂದ ಅಪ್ಪಾ ಎಂಬ ಸದ್ದು ಕೇಳಿಸಿತು. ಹೋಗಿ ನೋಡುವಷ್ಟರಲ್ಲಿ ಆತ ಇರಲಿಲ್ಲ. ಮನೆ ಕಡೆ ಹೋಗಿರಬಹುದು ಎಂಬ ಅನುಮಾನದಿಂದ ಫೋನ್ ಮಾಡಿ ವಿಚಾರಿಸಿದೆ. ಆದರೆ, ಬಂದಿಲ್ಲ ಎಂದು ಹೇಳಿದ್ದರಿಂದ ಭಯದಲ್ಲೇ ಸುತ್ತಮುತ್ತ ಹುಡುಕಾಡಿದೆವು.
ರಾತ್ರಿ ಇಲ್ಲಿ ಹುಲಿ ಬಂದಿತ್ತು ಎಂಬ ಕೇಳಿ ಅನುಮಾನ ಹಾಗೂ ಭಯ ಇನ್ನೂ ಹೆಚ್ಚಾಗಿತ್ತು. ಹೊಲದಲ್ಲಿಯೇ ಹುಡುಕಾಟ ನಡೆಸುತ್ತಿದ್ದಾಗ ಅಲ್ಲಲ್ಲಿ ರಕ್ತ ಚೆಲ್ಲಿದ್ದು ಕಾಣಿಸಿತು. ಅದರ ಜಾಡು ಹಿಡಿದು ಹೋಗಿ ನೋಡಿದಾಗ ನಮ್ಮ ಹುಡುಗ ಮೃತಪಟ್ಟಿದ್ದು ಗೊತ್ತಾಯಿತು ಎಂದು ಮೃತ ಬಾಲಕನ ತಂದೆ ಕೃಷ್ಣಾ ನಾಯಕ ನೋವು ತೋಡಿಕೊಂಡಿದ್ದಾರೆ.