ಮೈಸೂರು: ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆ ನನಗೆ ಸೂಕ್ತವಲ್ಲ. ಆ ಹುದ್ದೆ ಬೇಡ ಎಂದು ಹಿಂದೆಯೇ ಹೇಳಿದ್ದೆ ಎಂದು ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ.
ಮುಖ್ಯಮಂತ್ರಿಗೆ ರಾಜಕೀಯವಾಗಿ ಬೆಂಬಲ ನೀಡುವ ಕೆಲಸವನ್ನು ಹಿಂದಿನಿಂದಲೂ ಮಾಡುತ್ತಾ ಬಂದಿದ್ದೇವೆ. ನನ್ನ ಹಿರಿತನಕ್ಕೆ ತಕ್ಕ ಸ್ಥಾನ ಸಿಗುವ ವಿಶ್ವಾಸವಿತ್ತು. ರಾಜಕೀಯ ಕಾರ್ಯದರ್ಶಿ ಹುದ್ದೆ ಕೊಟ್ಟಿದ್ದಾರೆ ಎಂಬ ಮಾಹಿತಿ ಬಂದಿದೆ. ಆದರೆ ಸಿಎಂ ಕಚೇರಿಯಿಂದ ಇನ್ನೂ ಕರೆ ಬಂದಿಲ್ಲ. ನಿರ್ಧಾರ ಕೈಗೊಳ್ಳುವ ಅಧಿಕಾರವಿರುವ ಹುದ್ದೆ ಇದಲ್ಲ, ಹಾಗಾಗಿ ನನಗೆ ತೃಪ್ತಿ ಇಲ್ಲ ಎಂದಿದ್ದಾರೆ.
ಉಳಿದಿರುವ ಮೂರು ಸಚಿವ ಸ್ಥಾನಗಳಲ್ಲಿ ನಮ್ಮ ಕೋಟಾ ಇಲ್ಲ. ಹಾಗಾಗಿ ಸಚಿವ ಸ್ಥಾನ ಕೇಳುವುದಿಲ್ಲ. ನನ್ನ ಸಿದ್ಧಾಂತಕ್ಕೆ ಬದ್ಧವಾಗಿ ರಾಜಕಾರಣ ಮಾಡಿದ್ದೇನೆ. ಸಿಕ್ಕಿದ್ದಕ್ಕೂ, ಸಿಗದೇ ಇದ್ದದ್ದಕ್ಕೂ ತೃಪ್ತಿಯಿದೆ ಎಂದು ಹೇಳಿದ್ದಾರೆ.
ಹೊಸ ಸಂಪುಟ ರಚನೆಯಾದ ಬಳಿಕ ಸಿಎಂ ಜತೆ ಪ್ರತ್ಯೇಕವಾಗಿ ಮಾತನಾಡಿಲ್ಲ. ಸಿಎಂ ಕರೆದು ಮಾತನಾಡಿದರೆ, ಆ ಮಾತುಕತೆಯ ಬಳಿಕವೇ ಹುದ್ದೆ ಸ್ವೀಕರಿಸಬೇಕೇ ಎಂಬುದನ್ನು ನಿರ್ಧರಿಸುತ್ತೇನೆ ಎಂದು ತನ್ವೀರ್ ಸೇಠ್ ತಿಳಿಸಿದ್ದಾರೆ.




