ಮೈಸೂರು: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಪಿಲಾ ನದಿ ತೀರದ ತಟದಲ್ಲಿರುವ ಸುತ್ತೂರು ಶ್ರೀಕ್ಷೇತ್ರದಲ್ಲಿ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಾಳೆಯಿಂದ ಜನವರಿ.31ರವರೆಗೆ ನಡೆಯಲಿದೆ.
ಮೈಸೂರು: ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕಪಿಲಾ ನದಿ ತೀರದ ತಟದಲ್ಲಿರುವ ಸುತ್ತೂರು ಶ್ರೀ ಕ್ಷೇತ್ರದಲ್ಲಿ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಬಿಂಬಿಸುವ ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವ ನಾಳೆಯಿಂದ ಜನವರಿ.31ರವರೆಗೆ ನಡೆಯಲಿದ್ದು, ಅದಕ್ಕಾಗಿ ಎಲ್ಲಾ ಸಿದ್ಧತೆ ನಡೆದಿದೆ.
೬ ದಿನಗಳ ಕಾಲ ಮಿನಿ ದಸರಾ ಮಹೋತ್ಸವದಂತೆ ನಡೆಯುವ ಸುತ್ತೂರು ಜಾತ್ರೆಗೆ ಸಕಲ ಸಿದ್ಧತೆಗಳು ಮಾಡಿಕೊಳ್ಳಲಾಗಿದ್ದು, ಶ್ರೀಕ್ಷೇತ್ರ ಸುತ್ತೂರು ಮದುವಣಗಿತ್ತಿಯಂತೆ ಶೃಂಗಾರಗೊಳ್ಳುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಸಾಮೂಹಿಕ ವಿವಾಹ, ಭಜನಾ ಮೇಳ, ವಸ್ತುಪ್ರದರ್ಶನ, ಕುಸ್ತಿ ಪಂದ್ಯಾವಳಿ, ದನಗಳ ಜಾತ್ರೆ, ನಾಟಕಗಳು, ಕೃಷಿ ಬ್ರಹ್ಮಾಂಡ ಸೇರಿದಂತೆ ಹತ್ತು ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಜಾತ್ರಾ ಮಹೋತ್ಸವದಲ್ಲಿ ನಡೆಯಲಿವೆ.
ನಾಳೆ ವಸ್ತುಪ್ರದರ್ಶನ, ಕೃಷಿ ಮೇಳ, ಸಾಂಸ್ಕೃತಿಕ ಮೇಳ, ಆರೋಗ್ಯ ತಪಾಸಣಾ ಶಿಬಿರ, ದೋಣಿವಿಹಾರ ನಡೆಯಲಿದ್ದು, ಸಾವಿರಾರು ಮಂದಿ ಭಾಗಿಯಾಗುವ ನಿರೀಕ್ಷೆಯಿದೆ.
ಎಲ್ಲಾ ಕಾರ್ಯಕ್ರಮಗಳು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ ಸೇರಿದಂತೆ ವಿವಿಧ ಮಠಾಧೀಶರು ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ.
ಇನ್ನು ವಿಶೇಷವೆಂದರೆ ಜಾತ್ರೆಯಲ್ಲಿ ನಿತ್ಯ ೩ ಲಕ್ಷದಂತೆ ೨೦ ಲಕ್ಷಕ್ಕೂ ಹೆಚ್ಚು ಮಂದಿಗೆ ಪ್ರಸಾದ ವಿನಿಯೋಗ ನಡೆಯಲಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸರನ್ನು ಸಹ ನಿಯೋಜನೆ ಮಾಡಲಾಗಿದೆ.