ಪ್ರಧಾನಿ ರೋಡ್ ಶೋ ಮಾಡಿದ್ದ ರಸ್ತೆಗಳಲ್ಲಿ ಗೋ ಮೂತ್ರ, ನೀರು ಹಾಕಿ ಸ್ವಚ್ಛಗೊಳಿಸಿದ ಸಿದ್ದರಾಮಯ್ಯ ಅಭಿಮಾನಿ

ಮೈಸೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ರೋಡ್ ಶೋ ನಡೆಸಿದ್ದರು. ಪ್ರಧಾನಿ ಮೋದಿ ರೋಡ್ ಶೋ ನಡೆಸಿದ ರಸ್ತೆಯನ್ನು ಮಾಜಿ ಸಿಎಂ ಸಿದ್ದರಾಮಯ್ಯನವರ ಅಭಿಮಾನಿ ಕಂಸಾಳೆ ರವಿ ಗೋಮೂತ್ರದಿಂದ ಸ್ವಚ್ಛಗೊಳಿಸಿದ ಘಟನೆ ಇಂದು ಭಾನುವಾರ ನಡೆದಿದೆ.

ಮೋದಿ ರೋಡ್ ಶೋ ಮಾಡಿದ್ದ ಮೈಸೂರಿನ ಸಯ್ಯಾಜಿ ರಸ್ತೆಗೆ ಕಾಂಗ್ರೆಸ್‌ ಕಾರ್ಯಕರ್ತರು ಸಗಣಿ ಗೋ ಮೂತ್ರ, ನೀರು ಹಾಕಿ ಸ್ವಚ್ಛ ಮಾಡಿದ್ದಾರೆ. ಚುನಾವಣೆ ಮೊದಲು ಮೈಸೂರಿನ ರಾಜಮಾರ್ಗದಲ್ಲಿ ಮೋದಿ ಭರ್ಜರಿ ರೋಡ್‌ ಶೋ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ರಸ್ತೆಗೆ ಮೈಸೂರು ಕಾಂಗ್ರೆಸ್ ಮುಖಂಡರು ಸಗಣಿ ನೀರು ಹಾಕಿ ಸ್ವಚ್ಛಗೊಳಿಸುವ ಮೂಲಕ ಬಿಜೆಪಿಯನ್ನು ವ್ಯಂಗ್ಯ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಕಾಂಗ್ರೆಸ್ ಮುಖಂಡ ಕಂಸಾಳೆ ರವಿ, ಚುನಾವಣೆಗೂ ಮುನ್ನ ಮೈಸೂರಿನ ರಾಜ ಮಾರ್ಗದಲ್ಲಿ ಭರ್ಜರಿ ರೋಡ್ ಶೋ ಮೋದಿ ನಡೆಸಿದ್ದರು. ಅಂಬಾರಿ ಹಾದು ಹೋಗುವ ರಾಜ ಮಾರ್ಗದಲ್ಲಿ ಮೋದಿ ರೋಡ್ ಶೋ ಮಾಡಿದ್ದೆ ದೊಡ್ಡ ತಪ್ಪು. ಇದು ರಾಜ ಮನೆತನಕ್ಕೆ ಮಾಡಿದ ಅಪಮಾನ.ಅಂಬಾರಿ ಬಿಟ್ಟರೆ ಇನ್ಯಾವುದೇ ದೊಡ್ಡ ಮೆರವಣಿಗೆ ಇಲ್ಲಿ ಮಾಡಿರಲಿಲ್ಲ. ಆದರೆ ಹಿಂದುತ್ವದ ಹೆಸರೇಳುವ ಬಿಜೆಪಿಯವರು ನಾಡಹಬ್ಬಕ್ಕೆ ಅಪಮಾನ ಆಗುವ ಹಾಗೇ ರೋಡ್ ಶೋ ಮಾಡಿದ್ದಾರೆ. ಹಾಗಾಗಿ ಮೈಸೂರು ಸೇರಿದಂತೆ ರಾಜ್ಯದಲ್ಲಿ ಬಿಜೆಪಿ ಧೂಳಿಪಟ ಆಗಿದೆ. ಈ ರಸ್ತೆಗೆ ಆಗಿರುವ ಕೊಳೆಯನ್ನು ತೊಳೆಯಲು ಸಗಣಿ ನೀರು ಹಾಕಿ ಸ್ವಚ್ಛ ಮಾಡುತ್ತಿದ್ದೇವೆ ಎಂದು ಟೀಕಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ