ನಂಜನಗೂಡು: ತಾಲ್ಲೂಕಿನ ದೊಡ್ಡಕವಲಂದೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹರಗನಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿಗಳ ಕೊರತೆಯಾದ ಪರಿಣಾಮ ಮಕ್ಕಳು ಜಗುಲಿಯಲ್ಲೇ ಪಾಠ ಕೇಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಒಂದರಿಂದ 5ನೇ ತರಗತಿವರೆಗೆ ಸುಮಾರು 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಪ್ರವೇಶ ಪಡೆದಿದ್ದಾರೆ. 5 ತರಗತಿಗಳಿಗೆ ಕೇವಲ ಒಂದೇ ಕೊಠಡಿ ಇದ್ದು, ಹೆಚ್ಚುವರಿ ಕೊಠಡಿ ನಿರ್ಮಾಣ ಮಾಡುವಂತೆ ಹಲವು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಇನ್ನು ಇದರ ಬಗ್ಗೆ ಜನಪ್ರತಿನಿಧಿಗಳೂ ಸಹ ಮನಸ್ಸು ಮಾಡಿಲ್ಲ. ಕೊಠಡಿ ಕೊರತೆ ಹಾಗೂ ಮೂಲಭೂತ ಸೌಕರ್ಯವಿಲ್ಲದ ಕಾರಣ ಪೋಷಕರು ಸರ್ಕಾರಿ ಶಾಲೆಗೆ ಗುಡ್ ಬೈ ಹೇಳಿ ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿದ್ದಾರೆ.
ಹೆಚ್ಚುವರಿ ಕೊಠಡಿ ಮತ್ತು ಮೂಲಭೂತ ಸೌಕರ್ಯ ಕೊಡದಿದ್ರೆ ಈ ಶಾಲೆ ಮುಚ್ಚಬೇಕಾದ ಪರಿಸ್ಥಿತಿ ಎದುರಾಗುತ್ತದೆ. ಈ ಹಿನ್ನೆಲೆಯಲ್ಲಿ ಇನ್ನಾದರೂ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಎಚ್ಚೆತ್ತು ಶಾಲೆ ಅಭಿವೃದ್ಧಿಗೆ ಮುಂದಾಗುತ್ತಾರಾ ಎಂಬುವುದನ್ನು ಕಾದುನೋಡಬೇಕಿದೆ.