ಮೈಸೂರು : ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭವಾದ ಆರ್‌ಎಸ್‌ಎಸ್, ಸ್ವಾತಂತ್ರ್ಯ ಹೋರಾಟದಲ್ಲಿ ಬಾಗಿಯಾಗಲಿಲ್ಲ. ಬದಲಾಗಿ ಬ್ರಿಟಿಷರೊಂದಿಗೆ ಕೈ ಜೋಡಿಸಿ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಮಾಡಿತ್ತು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಶುಕ್ರವಾರ ನಗರದ ಜೆಎಲ್‌ಬಿ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದ ಆವರಣದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಏರ್ಪಡಿಸಲಾಗಿದ್ದ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆರ್‌ಎಸ್‌ಎಸ್ ೧೯೨೫ರಲ್ಲೇ ಆರಂಭವಾಯಿತು. ಅದರ ಸಂಸ್ಥಾಪಕರಾದ ಹೆಡಗೇವಾರ್, ಗೋಳ್ವಲ್ಕರ್ ಸೇರಿದಂತೆ ಯಾರೊಬ್ಬರೂ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳಲಿಲ್ಲ. ನಂತರ ಅವರೇ ಸೇರಿ ಜನಸಂಘ ಎಂಬ ರಾಜಕೀಯ ಪಕ್ಷ ಆರಂಭಿಸಿದರು. ನಂತರ ಅದು ಬಿಜೆಪಿ ಆಯಿತು. ಬಿಜೆಪಿ ಎಂದಿಗೂ ಸಂವಿದಾನದ ಆಶಯದಂತೆ ನಡೆದುಕೊಳ್ಳಲಿಲ್ಲ ಎಂದರು.
ಆರ್‌ಎಸ್‌ಎಸ್, ವಿಹೆಚ್‌ಪಿ, ಬಿಜೆಪಿ ದೇಶ ಭಕ್ತಿಯನ್ನು ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುತ್ತಿವೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗದ ಅವರಿಗೆ ದೇಶಭಕ್ತಿ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ಅವರುಗಳು ಎಂದಿಗೂ ಸಮಾಜವನ್ನು ಒಟ್ಟಿಗೆ ಕೊಂಡೊಯ್ಯುವ ಕೆಲಸ ಮಾಡುವುದಿಲ್ಲ. ಸಮಾಜವನ್ನು ಒಡೆಯುವುದೇ ಅವರ ಕೆಲಸ ಎಂದು ಹೇಳಿದರು.
ಮಾತೆತ್ತಿದರೆ ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ವಿಶ್ವಾಸ್ ಎಂದು ಹೇಳುತ್ತಾರೆ. ಆದರೆ, ಅವರ ಪಕ್ಷದಿಂದ ಆಯ್ಕೆಯಾದ ಸಂಸದರಲ್ಲಿ ಒಬ್ಬನೇ ಒಬ್ಬ ಮುಸಲ್ಮಾನನಿಲ್ಲ. ಹೀಗಿರುವಾಗ ಸಬ್ ಕಾ ಸಾಥ್ ಹೇಗಾಯಿತು ಎಂದು ಪ್ರಶ್ನಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಸೋಲಿಸಿದ್ದು ಎನ್ನುತ್ತಾರೆ. ಆದರೆ, ಅಂಬೇಡ್ಕರ್ ಅವರೇ ಬರೆದ ಪತ್ರದಲ್ಲಿ ನನ್ನನ್ನು ಸೋಲಿಸಿದ್ದು ಹಿಂದೂ ಮಹಾ ಸಭಾದ ಸಾವರ್ಕರ್ ಹಾಗೂ ಸಿಪಿಐನ ರಂಗ ಎಂದೂ ಹೇಳಿದ್ದಾರೆ. ಹೀಗಾಗಿ ಜನರಿಗೆ ಸತ್ಯ ತಲುಪಿಸುವ ಕೆಲಸ ಮಾಡಬೇಕು. ಸುಳ್ಳನ್ನು ಅಲ್ಲಗಳೆಯಬೇಕು ಎಂದು ಕಾರ್ಯಕರ್ತರಿಗೆ ಸೂಚನೆ ನಿಡಿದರು.
ದೇಶದಲ್ಲಿ ಸಂವಿಧಾನಾತ್ಮಕವಾಗಿ, ಸಾಮಾಜಿಕ ನ್ಯಾಯ, ಜಾತ್ಯತೀತತೆ ರಕ್ಷಣೆಗಾಗಿ ಕೆಲಸ ಮಾಡುವ ಪಕ್ಷವಿದ್ದರೆ ಅದು ಕಾಂಗ್ರೆಸ್ ಮಾತ್ರ. ಜಾತ್ಯತೀತತೆ ಮತ್ತು ಸಮಾಜವಾದ ತೆಗೆದು ಹಾಕಬೇಕೆಂದು ಆರ್‌ಎಸ್‌ಎಸ್‌ನ ದತ್ತಾತ್ರೇಯ ಹೊಸಬಾಳೆ ಹೇಳುತ್ತಾರೆ. ಅವರಿಗೆ ಸಮಾಜವು ಅಸಮಾನತೆ, ಸಂಘರ್ಷ, ಜಾತೀಯತೆ, ಶೋಷಣೆ ಇರಬೇಕು. ಅಧಿಕಾರಕ್ಕೆ ಬಂದಾಗಲೆಲ್ಲ ಇದನ್ನೇ ಬಿಜೆಪಿಯವರು ಹೇಳುತ್ತಾರೆ, ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂತಹುದೇ ಸಂದರ್ಭ ಎದುರಾದರೂ ಸಿದ್ಧಾಂತದಲ್ಲಿ ರಾಜಿ ಆಗುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬಾರದು. ಬಿಜೆಪಿ, ಜೆಡಿಎಸ್ ಗೆ ಯಾವುದೇ ಸಿದ್ಧಾಂತವಿಲ್ಲ. ಹೀಗಾಗಿ ಸ್ವತಂತ್ರವಾಗಿ ಈ ಎರಡೂ ಪಕ್ಷಗಳು ಅಧಿಕಾರಕ್ಕೆ ಬಂದಿಲ್ಲ ಎಂದರು.
ಎಂದೂ ಕೂಡ ಸ್ಪಷ್ಟ ಬಹುಮತದೊಂದಿಗೆ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಅಧಿಕಾರ ಪಡೆದಿಲ್ಲ. ಆಪರೇಷನ್ ಕಮಲದ ಮೂಲಕ ಶಾಸಕರನ್ನು ಖರೀದಿಸಿ ಮುಖ್ಯಮಂತ್ರಿ ಆಗಿದ್ದರು. ಇದು ಜನರಿಗೆ ಗೊತ್ತಿದೆ ಎಂದರು.
ಯುವ ಕಾಂಗ್ರೆಸ್‌ಗೆ ೬೫ ವರ್ಷಗಳ ಇತಿಹಾಸವಿದೆ. ಹಲವಾರು ಸಂದರ್ಭದಲ್ಲಿ ರಾಜಕೀಯ ಸ್ಥಿತ್ಯಂತಗಳು ಎದುರಾದ ವೇಳೆ ತನ್ನದೇ ಆದ ಮಹತ್ತರ ಪಾತ್ರವನ್ನು ವಹಿಸಿದೆ. ನೀವುಗಳು ಯುವ ಕಾಂಗ್ರೆಸ್ ಮೂಲಕ ದೇಶವನ್ನು ಕಟ್ಟುವ ಕೆಲಸವನ್ನು ಮಾಡಬೇಕು. ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸಬೇಕು ಎಂದು ಕಿವಿಮಾತು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ತನ್ವೀರ್ ಸೇಠ್, ಇಂದು ಯುವಕರಲ್ಲಿ ಶಿಸ್ತು ಕಡಿಮೆಯಾಗುತ್ತಿದೆ. ಮುಖ್ಯಮಂತ್ರಿಗಳೇ ಕಾರ್ಯಕ್ರಮಕ್ಕೆ ಬರುತ್ತಾರೆ ಎಂದು ಗೊತ್ತಾದ ಮೇಲೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಇನ್ನಷ್ಟು ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಮಾಡಬಹುದಿತ್ತ. ಮುಂದಿನ ದಿನಗಳಲ್ಲಿ ತಪ್ಪುಗಳನ್ನು ಸರಿಪಡಿಸಿಕೊಳ್ಳಿ ಎಂದರು.
ಯುವ ಕಾಂಗ್ರೆಸ್ ಕಾರ್ಯಕರ್ತರು ನಾಯಕರ ಹಿಂದೆ ಓಡಾಡಿದಲ್ಲಿ ಯಾವುದೇ ಪ್ರಯೋಜನವಿಲ್ಲ. ಪಕ್ಷ ಸಂಘಟನೆ ಮಾಡುವುದು ಹಾಗೂ ಜನರ ಮಧ್ಯೆ ಇದ್ದು ಕೆಲಸ ಮಾಡುವ ಮೂಲಕ ನಾಯಕತ್ವ ಗುಣಗಳನ್ನು ಬೆಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇತ್ತೀಚಿಗೆ ಆಯ್ಕೆಯಾದ ನಗರ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸೈಯದ್ ಅಬ್ರಹಾರ್ ಹಾಗೂ ಪದಾಧಿಕಾರಿಗೆ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಮಂಜುನಾಥ್ ಗೌಡ ಪ್ರತಿಜ್ಞಾ ವಿಧಿ ಬೋಧಿಸಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಸಂವಿಧಾನ ಪೀಠಿಕೆ ಬೋಧಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಶಾಸಕರಾದ ಕೆ.ಹರೀಶ್‌ಗೌಡ, ಡಿ. ರವಿಶಂಕರ್, ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯ ಡಿ.ತಿಮ್ಮಯ್ಯ, ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಜ್ಯೋತಿಷ್, ಕೆಪಿಸಿಸಿ ವಕ್ತಾರ ಎಂ.ಲಕ್ಷಣ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಣ ಬಿ.ಜೆ.ವಿಜಯಕುಮಾರ್, ವಕ್ತಾರ ಎಂ.ಲಕ್ಷ ಣ್, ಮುಡಾ ಮಾಜಿ ಅಧ್ಯಕ್ಷ ಕೆ.ಮರೀಗೌಡ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಮುಂತಾದವರು ಪಾಲ್ಗೊಂಡಿದ್ದರು.





