ಮೈಸೂರು : ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಚಾಮುಂಡಿಬೆಟ್ಟದಲ್ಲಿ ಅ.೬ರಂದು ರಥೋತ್ಸವ ಹಾಗೂ ಅ.೮ರಂದು ತೆಪ್ಪೋತ್ಸವ ನಡೆಯಲಿದ್ದು, ಅದಕ್ಕಾಗಿ ಸಿದ್ಧತೆಮಾಡಿಕೊಳ್ಳಲಾಗುತ್ತಿದೆ.
ದಸರಾ ಮಹೋತ್ಸವದ ಜಂಬೂಸವಾರಿ ನೆರವೇರಿದ ನಂತರ ನಿಗಽತ ಮುಹೂರ್ತದಲ್ಲಿ ಚಾಮುಂಡಿಬೆಟ್ಟದಲ್ಲಿ ಭವ್ಯ ರಥೋತ್ಸವ ನಡೆಸುವ ಸಂಪ್ರದಾಯವಿದೆ. ಈಗಾಗಲೇ ದೇವಾಲಯದ ಮುಂಭಾಗ ದೊಡ್ಡ ರಥವನ್ನು ಅಣಿಗೊಳಿಸಲಾಗಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಅ.೬ರಂದು ಬೆಳಿಗ್ಗೆ ೯.೩೬ ರಿಂದ ೯.೫೮ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಬೆಟ್ಟದ ದೇವಾಲಯದ ಮುಂಭಾಗ ರಥೋತ್ಸವಕ್ಕೆ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಲಿದ್ದಾರೆ. ಈ ವೇಳೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್ ಹಾಗೂ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ:-ತಿ. ನರಸೀಪುರ | ಗುಂಜನರಸಿಂಹ ಸ್ವಾಮಿ ಆವರಣದ ಮಹಾಲಕ್ಷ್ಮಿ ಗುಡಿಯಲ್ಲಿ ಕಳ್ಳತನ ; ಸಿಸಿಟಿವಿಯಲ್ಲಿ ದೃಶ್ಯ ಸೆರೆ
ರಥೋತ್ಸವಕ್ಕೆ ಚಾಲನೆ ದೊರೆತ ಬಳಿಕ ಮಂಗಳವಾದ್ಯ, ಪೊಲೀಸ್ ಬ್ಯಾಂಡ್ ವಾದನ ಹಾಗೂ ವಿವಿಧ ಸಾಂಸ್ಕೃತಿಕ ಕಲಾತಂಡಗಳು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದು, ಫಿರಂಗಿ ದಳದ ಸಿಬ್ಬಂದಿಗಳು ಚಿಕ್ಕ ಸಿಡಿಮದ್ದು ಟ್ರ್ತ್ಯ್ಯಾಲಿ ಬಳಸಿ ರಥೋತ್ಸವದ ಮಾರ್ಗದ ಉದ್ದಕ್ಕೂ ಸಿಡಿಮದ್ದು ಸಿಡಿಸಲಿದ್ದಾರೆ. ದೇವಾಲಯದ ಒಂದು ಸುತ್ತು ಪ್ರದಕ್ಷಿಣೆ ಹಾಕಲು ಒಂದು ಗಂಟೆ ಸಮಯ ಬೇಕಾಗಲಿದ್ದು, ಅಪಾರ ಸಂಖ್ಯೆಯ ಭಕ್ತರು ಚಾಮುಂಡಿಬೆಟ್ಟಕ್ಕೆ ಆಗಮಿಸಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥಿಸಿ ರಥಕ್ಕೆ ಹಣ್ಣು-ಜವನ ಎಸೆದು ಪ್ರಾರ್ಥಿಸಲಿದ್ದಾರೆ.
ರಥೋತ್ಸವ ಜರುಗಿದ ಎರಡು ದಿನದ ನಂತರ ಅ.೮ರಂದು ಸಂಜೆ ೬ ಗಂಟೆ ನಂತರ ಚಾಮುಂಡಿಬೆಟ್ಟದ ದೇವಿಕೆರೆಯಲ್ಲಿ ಚಾಮುಂಡೇಶ್ವರಿ ತಾಯಿಯ ಉತ್ಸವ ಮೂರ್ತಿಗೆ ತೆಪ್ಪೋತ್ಸವ ಸೇವೆ ಜರುಗಲಿದೆ. ತೆಪ್ಪೋತ್ಸವದ ವೇಳೆ ರಾಜವಂಶಸ್ಥರು ಪಾಲ್ಗೊಳ್ಳಲಿದ್ದಾರೆ. ತೆಪ್ಪೋತ್ಸವದ ಮೂಲಕ ಈ ಸಾಲಿನ ದಸರಾ ಮಹೋತ್ಸವದ ಧಾರ್ಮಿಕ ಕಾರ್ಯ ಸಂಪನ್ನಗೊಳ್ಳಲಿದೆ.





