ಮೈಸೂರು: ಕಾಂಗ್ರೆಸ್ ನವರು ನನ್ನ ಬಗ್ಗೆ ಮೃದುಧೋರಣೆ ತಳೆದಿರುವ ಕುರಿತು ಏನನ್ನು ಹೇಳುವುದಿಲ್ಲ. ಯಾರ ಬಗ್ಗೆಯೂ ನಾನು ವೈಯುಕ್ತಿಕ ಟೀಕೆಗಳನ್ನು ಮಾಡುವುದಿಲ್ಲ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ್ದಾರೆ.
ಯದುವೀರ್ ಒಡೆಯರ್ ಬಗ್ಗೆ ಕಾಂಗ್ರೆಸ್ ನಾಯಕರು ಸಾಫ್ಟ್ ಕಾರ್ನರ್ ಆಗಿರುವ ವಿಚಾರ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಹುದ್ದೆಗೆ ತನ್ನದೇ ಆದ ಮಹತ್ವವಿದೆ. ಮುಖ್ಯಮಂತ್ರಿಗಳ ಬಗ್ಗೆ ನಾನು ಏನನ್ನೂ ಮಾತನಾಡುವುದಿಲ್ಲ. ಯಾರನ್ನೂ ಕೂಡ ನಾನು ವೈಯುಕ್ತಿಕವಾಗಿ ಟೀಕಿಸುವುದಿಲ್ಲ. ಕಾಂಗ್ರೆಸ್ ನವರು ನನ್ನ ಬಗ್ಗೆ ಮೃದುಧೋರಣೆ ತಳೆದಿರುವ ಕುರಿತು ಏನನ್ನು ಹೇಳುವುದಿಲ್ಲ. ಯಾರ ಬಗ್ಗೆಯೂ ನಾನು ವೈಯುಕ್ತಿಕ ಟೀಕೆಗಳನ್ನು ಮಾಡುವುದಿಲ್ಲ ಎಂದರು.
ಇನ್ನು ಇಷ್ಟು ದಿನ ನಾನು ಜನಸಾಮಾನ್ಯರ ಜೊತೆ ಬೆರೆಯಲು ಸಾಧ್ಯವಾಗಿರಲಿಲ್ಲ. ಇದೀಗ ಬಿಜೆಪಿ ಅಭ್ಯರ್ಥಿ ಆಗಿರುವುದರಿಂದ ಜನಸಾಮಾನ್ಯರನ್ನು ಭೇಟಿ ಮಾಡುತ್ತಿದ್ದೇನೆ. ಜನರು ಕೂಡ ಪ್ರೀತಿ, ಅಭಿಮಾನದಿಂದ ಕಾಣುತ್ತಿದ್ದಾರೆ. ನಾನು ಕೂಡ ಜನರೊಂದಿಗೆ ಬೆರೆತು ಸಮಸ್ಯೆಗಳನ್ನು ಆಲಿಸುತ್ತಿದ್ದೇನೆ. ಇದು ನನಗೆ ಸಂತಸ ತಂದಿದೆ ಎಂದಿದ್ದಾರೆ.
ಇದುವರೆಗೆ ನನಗೆ ಏನು ಸಿಕ್ಕಿರಲಿಲ್ಲವೋ ಅದು ಕಳೆದ 15 ದಿನಗಳಿಂದ ಸಿಗುತ್ತಿದೆ. ಜನರು ತೋರುತ್ತಿರುವ ಕಾಳಜಿಗೆ ನಾನು ಆಭಾರಿ. ನಾನು ಮುಂದೆಯೂ ಇದೇ ರೀತಿ ಜನರ ಜೊತೆ ಇರುತ್ತೇನೆ ಎಂದು ತಿಳಿಸಿದರು.