ಮೈಸೂರು: “ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ತಪ್ಪಲ್ಲ, ಬಿಜೆಪಿ ಮೈತ್ರಿ ಮಾಡಿಕೊಂಡರೆ ತಪ್ಪಾ? ಮೈತ್ರಿ ಸೋಲು ಗೆಲುವಿನ ಬಗ್ಗೆ ಜನ ತೀರ್ಮಾನಿಸುತ್ತಾರೆ” ಎಂದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ವಿಚಾರವಾಗಿ ಕಾಂಗ್ರೆಸ್ ಮಾಡಿರುವ ಟೀಕೆಗಳಿಗೆ ಬಿಜೆಪಿ ಸಂಸದ ವಿ ಶ್ರೀನಿವಾಸ ಪ್ರಸಾದ್ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನಲ್ಲಿ ಲಿಂಗಾಯತರ ಕಡೆಗಣಿಸಲಾಗುತ್ತಿದೆ ಎಂಬ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಆರೋಪಕ್ಕೆ ಸಂಬಂಧಿಸಿ, ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಆಘಾತಕಾರಿಯಾದದ್ದು. ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು. ಅವರು ಹೇಳಿರುವ ಈ ಮಾತು ತುಂಬಾ ಗಂಭೀರವಾದದ್ದು, ಸಮಾಜದ ಹಿತದೃಷ್ಟಿಯಿಂದ ಇದು ಒಳ್ಳೆಯದಲ್ಲ ಅಂತ ಅಭಿಪ್ರಾಯಪಟ್ಟರು.
ಸಮಸ್ಯೆಗೆ ಮೇಕೆದಾಟು ಏಕೈಕ ಪರಿಹಾರ
ಇನ್ನು ಕಾವೇರಿ ನೀರಿನ ವಿವಾದಕ್ಕೆ ಮೇಕೆದಾಟು ಯೋಜನೆ ಅನುಷ್ಠಾನವೇ ಏಕೈಕ ಪರಿಹಾರವಾಗಿದೆ. ಉತ್ತಮ ಮಳೆಯಾದಾಗ ಯಥೇಚ್ಛ ನೀರು ತಮಿಳುನಾಡಿಗೆ ಹರಿಯುತ್ತೆ. ಆದರೆ, ಮಳೆ ಕೊರತೆ ಉಂಟಾದಾಗ ಸಮಸ್ಯೆ ಎದುರಾಗುತ್ತದೆ. ಇನ್ನು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಬಂದು ಮತ್ತೊಂದು ಅಣೆಕಟ್ಟು ನಿರ್ಮಾಣವಾದರೆ ಮಳೆ ಕೊರತೆ ಉಂಟಾದಾಗಲೂ ತಮಿಳುನಾಡಿಗೆ ನೀರು ಹರಿಸಬಹುದು. ಹೀಗಾಗಿ ಮೇಕೆದಾಟು ಅನುಷ್ಠಾನವಾದರೆ ಕಾವೇರಿ ಸಮಸ್ಯೆಗೆ ಪರಿಹಾರ ಸಿಗುತ್ತೆ ಎಂದು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ತಿಳಿಸಿದರು.
ಕಳೆದ 2 – 3 ತಿಂಗಳಿಂದ ರಾಜಕೀಯ ಹಾಗೂ ಹೋರಾಟಗಳಿಂದ ಶ್ರೀನಿವಾಸ್ ಪ್ರಸಾದ್ ದೂರ ಇದ್ದರು. ಆರೋಗ್ಯ ಕಾರಣಗಳಿಂದ ಯಾವ ಸಮಾರಂಭ ಹಾಗೂ ಸಾರ್ವಜನಿಕವಾಗಿ ಕಾಣಿಸಿಕೊಳ್ತಿರಲಿಲ್ಲ. ಜೊತೆಗೆ ಮುಂದಿನ ಬಾರಿ ನಾನು ಸಂಸತ್ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಚುನಾವಣೆಯಿಂದ ದೂರ ಉಳಿಯುತ್ತೇನೆ ಎಂದು ಘೋಷಿಸಿದ್ದರು. ಆದರೆ ಸಕ್ರಿಯ ರಾಜಕಾರಣದಲ್ಲಿ ಇರುವುದಾಗಿ ಭಾವುಕವಾಗಿ ತಿಳಿಸಿದ್ದರು. ಇದೀಗ ಆರೋಗ್ಯ ಸುಧಾರಿಸಿದ ಹಿನ್ನೆಲೆಯಲ್ಲಿ ಅವರು ಹೋರಾಟಕ್ಕೆ ಭಾಗಿಯಾಗಿದ್ದಾರೆ.