ಮೈಸೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನ ಅಂಗವಾಗಿ ಅಟಲ್ ಜನ್ಮ ಶತಾಬ್ಧಿ ಕಾರ್ಯಕ್ರಮ ನಡೆಯುತ್ತಿದ್ದು, ಫೆಬ್ರವರಿ 15 ರಿಂದ ಮಾರ್ಚ್ 15 ರವರೆಗೆ ಅಟಲ್ ಜೀ ಬಗ್ಗೆ ಸಮಾವೇಶ ಆಯೋಜನೆ ಮಾಡಲಾಗುವುದು ಎಂದು ಅಟಲ್ ಜೀ ಜನ್ಮ ಶತಾಬ್ಧಿ ಸಮಿತಿಯ ರಾಜ್ಯ ಸಹ ಸಂಚಾಲಕ ಫಣೀಶ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಇಂದು(ಫೆಬ್ರವರಿ.4) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2024ರ ಡಿಸೆಂಬರ್ 25 ರಿಂದ 2025 ಡಿಸೆಂಬರ್ 25 ರವರೆಗೆ ಅಟಲ್ ಜನ್ಮ ಶತಾಬ್ದಿ ಕಾರ್ಯಕ್ರಮ ನಡೆಯುತ್ತಿದೆ. ಅವರು ದೇಶ ಕಂಡ ಅತ್ಯಂತ ಶ್ರೇಷ್ಠ ರಾಜಕಾರಣಿಯಾಗಿದ್ದರು. ಅವರನ್ನು ರಾಷ್ಟ್ರ ರಾಜಕಾರಣದಲ್ಲೇ ಅಜಾತ ಶತ್ರು ಎಂದು ಕರೆಯಲಾಗಿತ್ತು. ಅಲ್ಲದೇ ಅವರ ಬಗ್ಗೆ ವಿರೋಧ ಪಕ್ಷದ ನಾಯಕರು ಕೂಡ ಅಭಿಮಾನವನ್ನು ಹೊಂದಿದ್ದು, ಈಗಿನ ರಾಜಕಾರಣಿಗಳಿಗೆ ಆದರ್ಶರಾಗಿ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದರು.
ಈ ಕಾರ್ಯಕ್ರಮವನ್ನು ವಾಜಪೇಯಿ ಅವರ 100ನೇ ಜನ್ಮ ದಿನೋತ್ಸವ ಪ್ರಯುಕ್ತ ವರ್ಷಪೂರ್ತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ. ಜೊತೆಗೆ 12 ಜನರ ತಂಡ ಕಾರ್ಯಕ್ರಮ ಸಮಿತಿಯಲ್ಲಿರಲಿದೆ. ಅಟಲ್ ಬಿಹಾರಿ ವಾಜಪೇಯಿ ಅವರ ಶತಮಾನೋತ್ಸದ ಅಂಗವಾಗಿ ಅವರ ಮೂರು ಮುಖಗಳಾದ ಸಂಘಟನಾತ್ಮಕ, ಹೋರಾಟ ಹಾಗೂ ವ್ಯಕ್ತಿತ್ವದ ಆಧಾರದ ಮೇಲೆ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.