ಮೈಸೂರು : ಮೈಸೂರು ಪ್ರಾಂತ್ಯದಲ್ಲೇ ಪ್ರಸೂತಿ, ಸ್ತ್ರೀರೋಗ ಮತ್ತು ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ನೀಡುವಲ್ಲಿ ಹೆಸರುವಾಸಿಯಾಗಿದ್ದ ಮೈಸೂರಿನ ಚೆಲುವಾಂಬ ಆಸ್ಪತ್ರೆಯ ಎನ್‌ಐಸಿಯುನಲ್ಲಿ ನವಜಾತ ಶಿಶುವಿಗೆ ಇರುವೆ ಕಚ್ಚಿ ಮೃತಪಟ್ಟ ವಿಚಾರ ದೊಡ್ಡ ಸದ್ದು ಮಾಡಿರುವ ಜೊತೆಗೆ, ಕಳೆದ 15 ತಿಂಗಳ ಅವಧಿಯಲ್ಲಿ 421 ಶಿಶುಗಳು, 12 ತಾಯಂದಿರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ನವಜಾತ ಶಿಶುಗಳ ಮರಣದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನಿರಂತರವಾಗಿ ಒತ್ತಡ ಹೇರುತ್ತಿರುವ ಸಂದರ್ಭದಲ್ಲೇ ಮಾಜಿ ಶಾಸಕ ಎಲ್.ನಾಗೇಂದ್ರ ಹೊರ ಹಾಕಿರುವ ದಾಖಲೆ ಪೋಷಕರಲ್ಲಿ ದೊಡ್ಡ ಆತಂಕ ಮೂಡಿಸಿದೆ.
ತಾಯಿ ಮತ್ತು ಮಗುವಿಗೆ ಗುಣಮಟ್ಟದ ಚಿಕಿತ್ಸೆ ನೀಡುವುದು, ಹೆರಿಗೆ ಸಂದರ್ಭ ತಾಯಿ ಮತ್ತು ಶಿಶು ಮರಣ ಪ್ರಮಾಣವನ್ನು ತಗ್ಗಿಸುವ ಸಲುವಾಗಿ 1880 ರಲ್ಲಿ ಮೈಸೂರು ಅರಸರು ನಿರ್ಮಾಣ ಮಾಡಿದ ಚೆಲುವಾಂಬ ಆಸ್ಪತ್ರೆ ಸುತ್ತಲಿನ ಐದಾರು ಜಿಲ್ಲೆಗಳ ಜನರಿಗೆ ಆರೋಗ್ಯ ಸೇವೆ ನೀಡುತ್ತಾ ಬಂದಿದೆ. ಈ ನಡುವೆ ವೈದ್ಯಕೀಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ, ಹೊರ ಜಿಲ್ಲೆ ರೋಗಿಗಳ ಒತ್ತಡ ಸೇರಿದಂತೆ ಹತ್ತಾರು ಕಾರಣಗಳಿಂದ 2025ರ ಜನವರಿಯಿಂದ ಈವರೆಗೆ ಆಸ್ಪತ್ರೆಯಲ್ಲಿ 421 ನವಜಾತ ಶಿಶುಗಳು ಅಸುನೀಗಿದ್ದು, 12 ತಾಯಂದಿರು ಮೃತಪಟ್ಟಿರುವ ಸಂಗತಿ ಬೆಳಕಿಗೆ ಬಂದಿದ್ದು, ಈ ಪ್ರಕರಣ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ.
ಇಡೀ ರಾಜ್ಯಕ್ಕೆ ಹೋಲಿಕೆ ಮಾಡಿದರೆ ಮೈಸೂರು ಜಿಲ್ಲೆ ಶಿಶು ಮರಣ ಪ್ರಮಾಣದಲ್ಲಿ ಕಡಿಮೆ ಇದೆ. ಆದರೂ ಆಸ್ಪತ್ರೆಯ ಎಸ್‌ಎನ್‌ಸಿಯು(ಸಿಕ್ ನ್ಯೂಬಾರ್ನ್ ಕೇರ್ ಯುನಿಟ್)ಗೆ ದಾಖಲಾದ 3,486 ಶಿಶುಗಳ ಪೈಕಿ 421 ಶಿಶುಗಳು ಮರಣಹೊಂದಿವೆ. ಈ ಪ್ರಮಾಣದಲ್ಲಿ ಶಿಶುಗಳ ಮರಣ ನಿರಂತರವಾಗಿ ಸಂಭವಿಸುತ್ತಿದ್ದರೂ ಅದನ್ನು ತಡೆಯುವಲ್ಲಿ ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಜಿಲ್ಲಾಡಳಿತ ವಿಫಲವಾಗಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.





