ಎಚ್.ಡಿ.ಕೋಟೆ : ತಾಲ್ಲೂಕಿನ ಡಿ.ಬಿ.ಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಚ್ಚೂರು, ಗೋಳೂರು ಇನ್ನಿತರ ಪ್ರದೇಶಗಳಲ್ಲಿ ಸಣ್ಣ ರೈತರಿಗೆ ಬೆಳೆ ಮತ್ತು ಮನೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳುವುದೇ ಸವಾಲಾಗಿದೆ.
ಎರಡು ದಿನಗಳ ಹಿಂದೆ ಹೊಸೂರು ಬಸವರಾಜ್ ಅವರ ಮನೆಯ ಹಿತ್ತಲಲ್ಲಿ ಕಾಡಾನೆ ಕಾಣಿಸಿಕೊಂಡು ಭೀತಿ ಮೂಡಿಸಿತ್ತು. ಗುರುವಾರ ಮಚ್ಚೂರು ಗ್ರಾಮದಲ್ಲಿ ಬಲರಾಮ ಎಂಬವರ ಮನೆಯ ಬಳಿ ಬಂದು ಹಾನಿ ಮಾಡಿದ್ದು, ಮನೆಯ ನೂರಾರು ಹೆಂಚುಗಳನ್ನು ಪುಡಿ ಪುಡಿ ಮಾಡಿದೆ. ಸಂಜೆ ೭ ಗಂಟೆ ನಂತರ ಸ್ಥಳೀಯರು ಓಡಾಡಲು ಭಯಪಡುವಂತಾಗಿದೆ.
ಪಕ್ಕದಲ್ಲಿ ಗುಡಿಸಲುಗಳಲ್ಲಿ ವಾಸಿಸುತ್ತಿರುವ ಹತ್ತಾರು ಕುಟುಂಬಗಳು ಕಾಡಾನೆ ದಾಳಿಯ ಭೀತಿಯಲ್ಲಿದ್ದಾರೆ. ಈ ಕುರಿತು ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಸ್ಥಳೀಯರ ಬೆಳೆಗಳು, ಮನೆಗಳಿಗೆ ಹಾನಿಯಾದಾಗ ಪರಿಹಾರ ನೀಡದೆ, ಅರಣ್ಯ ಭೂಮಿಯ ನೆಪ ಒಡ್ಡಿ ನುಣುಚಿಕೊಳ್ಳುತ್ತಿದ್ದಾರೆ. ಬ್ರಿಟಿಷರ ಕಾಲದಿಂದಲೂ ವಾಸವಿದ್ದರೂ ವಾಸದ ಭೂಮಿಗೆ ಹಕ್ಕು ಪತ್ರ ನೀಡದೆ, ಕಾಡುಪ್ರಾಣಿಗಳಿಂದ ನಷ್ಟಕ್ಕೆ ಪರಿಹಾರ ನೀಡದೆ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದಾಗಿ ರೈತರು ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಇನ್ನಾದರೂ ಸ್ಥಳೀಯ ಶಾಸಕರು, ಅರಣ್ಯ ಅಧಿಕಾರಿಗಳು ಕಾಡಂಚಿನಲ್ಲಿ ರೈಲ್ವೆ ಕಂಬಿಯನ್ನು ಅಳವಡಿಸಿ ಕಾಡಾನೆಗಳ ಹಾವಳಿ ತಡೆಯಬೇಕೆಂದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.





