ಮೈಸೂರು: ಮೂವರು ನರ್ಸಿಂಗ್ ವಿದ್ಯಾರ್ಥಿಗಳು ಮೃತಪಟ್ಟಿದ್ದ ಮೀನಾಕ್ಷಿಪುರದ ಕೆಆರ್‌ಎಸ್ ಹಿನ್ನೀರಿನ ದುರಂತದ ಸ್ಥಳವನ್ನು ಅಧಿಕಾರಿಗಳು ಪರಿಶೀಲಿಸಿದರು.
ಗುಂಗ್ರಾಲ್ ಛತ್ರ ಗ್ರಾಮ ಸಮೀಪದ ಮೀನಾಕ್ಷಿಪುರದ ಕೆಆರ್‌ಎಸ್ ಹಿನ್ನೀರಿನ ಪ್ರದೇಶದಲ್ಲಿ ಈಜಲು ನೀರಿಗಿಳಿದಿದ್ದ ಆರು ಮಂದಿ ವಿದ್ಯಾರ್ಥಿಗಳಲ್ಲಿ ಮೂವರು ಮೃತಪಟ್ಟಿದ್ದರು. ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿ ಶವಗಳನ್ನು ಹೊರ ತೆಗೆದಿದ್ದರು. ಹೀಗಾಗಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಜಿಲ್ಲಾಽಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾದಧಿಕಾರಿ ಎಸ್. ಯುಕೇಶ್ ಕುಮಾರ್ ದುರಂತದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಇಲವಾಲ ಪೊಲೀಸ್‌ಠಾಣೆಯ ಇನ್‌ಸ್ಪೆಕ್ಟರ್ ಅವರು ಅಧಿಕಾರಿಗಳಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಮೀನಾಕ್ಷಿಪುರದ ಕೆಆರ್‌ಎಸ್ ಹಿನ್ನೀರಿನ ಪ್ರದೇಶಕ್ಕೆ ನಿತ್ಯ ನೂರಾರು ಜನರು ಬರುತ್ತಿದ್ದಾರೆ. ಪೊಲೀಸರು ಇದನ್ನು ತಡೆದರೂ ಕೆಲವರು ಒಳಗೆ ಬರುತ್ತಿದ್ದಾರೆ. ಹಾಗಾಗಿ, ಇದನ್ನು ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಹೇಳಿದರು. ಈ ಜಾಗದಲ್ಲಿ ಪಾರ್ಟಿ ಮಾಡಲು ಬರುವವರು ಈಜಲು ನೀರಿಗೆ ಧುಮುಕಿ ನೀರಿನ ಸೆಲೆಗೆ ಕೊಚ್ಚಿ ಹೋಗುತ್ತಾರೆ. ಕೆಲವರು ಬೋಟ್‌ಗಳನ್ನು ಇಟ್ಟುಕೊಂಡು ಪ್ರವಾಸಿಗರನ್ನು ಕರೆದೊಯ್ಯುತ್ತಾರೆ ಎಂದು ವಿವರಿಸಿದರು. ಇದನ್ನು ಪರಿಗಣಿಸಿದ ಉಸ್ತುವಾರಿ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಸ್ಥಳದಲ್ಲಿರುವ ಎಲ್ಲಾ ಬೋಟಿಂಗ್‌ಗಳನ್ನು ಸೀಜ್ ಮಾಡಬೇಕು. ಮುಂದಿನ ದಿನಗಳಲ್ಲಿ ಈ ಜಾಗಕ್ಕೆ ಯಾರಿಗೂ ಅವಕಾಶ ಕೊಡಬಾರದು ಎಂದು ಸೂಚನೆ ನೀಡಿದರು. ಕಾನೂನು ಬಾಹಿರವಾಗಿ ಹಿನ್ನೀರಿನ ಪ್ರದೇಶಕ್ಕೆ ಬಂದರೆ ಅಂತಹವರ ಮೇಲೆ ಕ್ರಮ ಜರುಗಿಸಬೇಕು. ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಸಮಯ ಕಳೆಯಲು ಬರುತ್ತಾರೆ. ಆದರೆ, ದುರಂತದ ಸ್ಥಳವನ್ನು ಗಮನಿಸಬೇಕು. ಮೂವರು ಅಮಾಯಕ ವಿದ್ಯಾರ್ಥಿಗಳ ಸಾವಿನ ವಿಚಾರ ಬೇಸರ ತಂದಿದೆ. ಮುಂದಿನ ದಿನಗಳಲ್ಲಿ ಯಾರೇ ಬಂದರೂ ಅವಕಾಶ ಕೊಡಬಾರದು. ಈ ಪ್ರದೇಶವನ್ನು ನಿರ್ಬಂಧಿತ ಪ್ರದೇಶವೆಂದು ಘೋಷಿಸುವ ಬಗ್ಗೆ ಚರ್ಚಿಸಿ ನಿರ್ಧಾರ ಮಾಡಲಾಗುವುದು ಎಂದರು.
ತಹಸಿಲ್ದಾರ್ ಮಹೇಶ್ ಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಸ್.ಅರುಣಕುಮಾರ್ ಹಾಜರಿದ್ದರು.





