Mysore
33
scattered clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಮೈಸೂರು ವಿವಿ | ಪಿಎಚ್.ಡಿ ಪ್ರವೇಶಾತಿ ಫಲಿತಾಂಶ ರದ್ದುಗೊಳಿಸುವಂತೆ ದಸಂಸ ಮನವಿ

ಮೈಸೂರು: ಯುಜಿಸಿ ಮಾರ್ಗಸೂಚಿ ಉಲ್ಲಂಘಿಸಿ ಮೈಸೂರು ವಿವಿ ನಡೆಸಿರುವ 2024-25ರ ಪಿಎಚ್.ಡಿ. ಪ್ರವೇಶಾತಿ ಫಲಿತಾಂಶವನ್ನು ರದ್ದುಗೊಳಿಸಿ, ಉನ್ನತ ಮಟ್ಟದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ಒತ್ತಾಯಿಸಿದೆ.

ಈ ಸಂಬಂಧ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಅವರು, ಮೈಸೂರು ವಿಶ್ವವಿದ್ಯಾನಿಲಯ ಪರೀಕ್ಷಾಂಗ ಕುಲಸಚಿವರಿಗೆ ದೂರು ಸಲ್ಲಿಸಿದ್ದಾರೆ.

ಯುಜಿಸಿ ಮಾರ್ಗಸೂಚಿಯನ್ವಯ ಯಾವುದೇ ವಿಶ್ವವಿದ್ಯಾನಿಲಯ ಪಿಎಚ್.ಡಿ. ಪ್ರವೇಶಾತಿ ಪರೀಕ್ಷೆ ನಡೆಸಬೇಕಾದರೆ ವಿಷಯವಾರು ಮತ್ತು ಮೀಸಲಾತಿಯನ್ನು ಖಾಲಿಯಿರುವ ಸಂಶೋಧಕರ ಸ್ಥಾನಗಳ ಮಾಹಿತಿಯೊಂದಿಗೆ ರಾಷ್ಟ್ರಮಟ್ಟದ ಕನಿಷ್ಠ ಎರಡು ಪತ್ರಿಕೆಗಳಲ್ಲಿ ಪ್ರಕಟಣೆ ಹೊರಡಿಸಬೇಕು. ಅರ್ಜಿ ಪಡೆದ ನಂತರ ಪರೀಕ್ಷೆ ಪಠ್ಯಕ್ರಮ ಬಿಡುಗಡೆಗೊಳಿಸಬೇಕು. ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಬಹು ಆಯ್ಕೆ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಓಎಂಆರ್ ಕಾರ್ಬನ್ ಪ್ರತಿ ನೀಡಬೇಕು. ಆ ಓಎಂಆರ್ ಪ್ರತಿಯನ್ನು ಡಿಜಿಟಲ್ ಮೌಲ್ಯಮಾಪನಕ್ಕೆ ಒಳಪಡಿಸಬೇಕು. ಪ್ರಶ್ನೆಗಳು ತಪ್ಪಿದ್ದಲ್ಲಿ ತಕರಾರು ಪಟ್ಟಿಯನ್ನು ಬಿಡುಗಡೆ ಮಾಡಿ ನಂತರ ಅಂತಿಮ ಆಯ್ಕೆ ಪಟ್ಟಿಯನ್ನು ಬಿಡುಗಡೆಗೊಳಿಸಬೇಕು. ಆ ನಂತರ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಿ ಸಂದರ್ಶನದ ಮೂಲಕ ಮಾರ್ಗದರ್ಶನಕ್ಕಾಗಿ ಆಯ್ಕೆ ಮಾಡಬೇಕು. ಆದರೆ, ಮೈಸೂರು ವಿವಿ ಯುಜಿಸಿಯ ಯಾವುದೇ ಮಾರ್ಗಸೂಚಿಯನ್ನು ಪಾಲಿಸದೇ ಸಂಪೂರ್ಣವಾಗಿ ಗಾಳಿಗೆ ತೂರಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಪರೀಕ್ಷಾ ಅಕ್ರಮದಿಂದ ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ರಾಜಕೀಯ ಪ್ರಭಾವಗಳು ನುಸುಳಲು ಅವಕಾಶ ಮಾಡಿಕೊಟ್ಟಂತಾಗುವುದಲ್ಲದೇ ನ್ಯಾಯಯುತವಾಗಿ ಪರೀಕ್ಷೆ ಬರೆದು ಆಯ್ಕೆಯಾದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ. ಇದರಿಂದ ಶೈಕ್ಷಣಿಕ ವಾತಾವರಣ ಹದಗೆಡುತ್ತದೆ.

ಆದ್ದರಿಂದ 2024-25ರ ಪಿಎಚ್.ಡಿ. ಪ್ರವೇಶಾತಿ ಫಲಿತಾಂಶವನ್ನು ರದ್ದುಗೊಳಿಸಿ, ಅವ್ಯವಹಾರಗಳಿಗೆ ಎಡೆ ಮಾಡಿರುವ ಪರೀಕ್ಷಾ ಕಾರ್ಯ ವಿಧಾನವನ್ನು ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Tags: