ನಂಜನಗೂಡು: ಮೈಕ್ರೋ ಫೈನಾನ್ಸ್ ಹಾವಳಿಯ ದುಂಡಾವರ್ತನೆಗೆ ಸಿಲುಕಿ ತಾಲ್ಲೂಕಿನ ಮಲ್ಕುಂಡಿ ಗ್ರಾಮದ ಕೃಷ್ಣಮೂರ್ತಿ ಆತ್ಮಹತ್ಯೆ ಮಾಡಿಕೊಂಡ ಹಿನ್ನಲೆಯಲ್ಲಿ ಐದು ಹಣಕಾಸು ಸಂಸ್ಥೆಗಳ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕೃಷ್ಣಮೂರ್ತಿ ಧರ್ಮಸ್ಥಳ ಸೀಶಕ್ತಿ ಸ್ವಸಹಾಯ ಸಂಘ, ಉಜ್ಜೀವನ್, ಬಿಎಸ್‌ಎಸ್, ಗ್ರಾಮೀಣ ಕೂಟ, ಐಡಿಎಫ್‌ಎಸ್ ಸೇರಿದಂತೆ ಐದು ಸಂಸ್ಥೆಗಳಿಂದ ಅನೇಕ ಬಾರಿ ಸಾಲ ಪಡೆದು ಮರುಪಾವತಿ ಸಹ ಮಾಡಿದ್ದ ಎನ್ನಲಾಗಿದೆ.
ಈ ಸಂಸ್ಥೆಯ ಸಾಲ ಪಾವತಿಸಲು ಇನ್ನೊಂದು ಸಂಸ್ಥೆಯಿಂದ ಹೆಚ್ಚು ಸಾಲ ಪಡೆಯುತ್ತಲೇ ಕೃಷ್ಣಮೂರ್ತಿ ಎಲ್ಲ ಹಣಕಾಸು ಸಂಸ್ಥೆಗಳ ನಂಬಿಕೆ ಗಳಿಸಿಕೊಂಡು ಮೈಯೆಲ್ಲಾ ಸಾಲ ಮಾಡಿಕೊಂಡಿದ್ದು ಈಗ ಎಲ್ಲೂ ಸಾಲ ಸಿಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ. ಆತನಿಗೆ ಪೈಪೋಟಿಯ ಮೇಲೆ ಸಾಲ ನೀಡಿದ ಧರ್ಮಸ್ಥಳ ಸೀಶಕ್ತಿ ಸ್ವಸಹಾಯ ಸಂಘ, ಉಜ್ಜೀವನ್, ಬಿಎಸ್‌ಎಸ್, ಗ್ರಾಮೀಣ ಕೂಟ, ಐಡಿಎ-ಎಸ್ ಈ ಐದೂ ಸಂಸ್ಥೆಗಳ ಮೇಲೆ ಕೃಷ್ಣಮೂರ್ತಿ ಕುಟುಂಬ ದೂರು ನೀಡಿದ್ದು ಪೊಲೀಸರು ಆ ಐದು ಸಂಸ್ಥೆಗಳವರನ್ನು ಸೋಮವಾರ ಸಂಜೆ ಠಾಣೆಗೆ ಕರೆಸಿ ವಿಚಾರಣೆ ಆರಂಭಿಸಿದ್ದಾರೆ ಎಂದು ಡಿವೈಎಸ್‌ಪಿ ರಘು ತಿಳಿಸಿದ್ದಾರೆ.
ಈ ಪ್ರಕರಣದಿಂದಾಗಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಮೇಲೆ ಎಫ್‌ಐಆರ್ ಹಾಕಿದ ಮೊದಲ ತಾಲ್ಲೂಕು ನಂಜನಗೂಡು ಆಗಿದೆ.