Mysore
29
scattered clouds

Social Media

ಭಾನುವಾರ, 09 ಫೆಬ್ರವರಿ 2025
Light
Dark

ಮೈಸೂರು-ವಾರಾಣಸಿ ಎಕ್ಸ್‌ ಪ್ರೆಸ್‌ ರೈಲಿಗೆ ಹೆಚ್ಚುವರಿ ಬೋಗಿ: ಸಂಸದ ಯದುವೀರ್‌

ಮೈಸೂರು: ಹಿಂದೂ ಧರ್ಮದ ಅತ್ಯಂತ ಭವ್ಯ ಹಾಗೂ ಧಾರ್ಮಿಕ ಶ್ರದ್ಧೆಯ ಮಹಾ ಕುಂಭಮೇಳಕ್ಕೆ ತೆರಳಲು ಮೈಸೂರು ಯಾತ್ರಾರ್ಥಿಗಳಿಗೆ ನೆರವಾಗಲೆಂದು ಮೈಸೂರು-ವಾರಾಣಸಿ ಎಕ್ಸ್‌ ಪ್ರೆಸ್‌ ರೈಲಿಗೆ (22867) ಹೆಚ್ಚುವರಿ ಬೋಗಿಗಳಲ್ಲಿ ಅಳವಡಿಸಬೇಕು ಎಂದು ಪತ್ರ ಬರೆದಿದ್ದ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಮನವಿಗೆ ರೈಲ್ವೆ ಇಲಾಖೆ ಸ್ಪಂದಿಸಿದ್ದು, ಇದಕ್ಕೆ ಒಪ್ಪಿಗೆಯನ್ನು ಸೂಚಿಸಿದೆ.

ಉತ್ತರ ಪ್ರದೇಶದ ಧಾರ್ಮಿಕ ನಗರಿ ಪ್ರಯಾಗರಾಜ್‌ನಲ್ಲಿ 144 ವರ್ಷಗಳಿಗೊಮ್ಮೆ ನಡೆಯುವ ಮಹಾಕುಂಭ ಮೇಳಕ್ಕೆ ಮೈಸೂರು-ಕೊಡಗು ಕ್ಷೇತ್ರದಿಂದ ತೆರಳುವ ಯಾತ್ರಿಗಳಿಗೆ ನೆರವಾಗಲೆಂದು ಹೆಚ್ಚುವರಿ ಬೋಗಿಗಳನ್ನು ಅಳವಡಿಸಬೇಕು ಎಂದು ರೈಲ್ವೆ ಇಲಾಖೆಗೆ ಸಂಸದ ಯದುವೀರ್ ಪತ್ರ ಬರೆದು ಮನವಿ ಮಾಡಿದ್ದರು.

ಯದುವೀರ್‌ ಅವರು ಬರೆದ ಪತ್ರದಲ್ಲಿ ಮೈಸೂರು-ವಾರಾಣಸಿ ಎಕ್ಸ್‌ ಪ್ರೆಸ್‌ ರೈಲು ಪ್ರಯಾಗರಾಜ್ ಮೂಲಕ ಹಾದು ಹೋಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದರೆ ಅನುಕೂಲವಾಗುತ್ತದೆ. ಹೀಗಾಗಿ ಹೆಚ್ಚುವರಿ ಕೋಚ್ ಅನ್ನು ಅಳವಡಿಸಬೇಕು ಎಂದು ಉಲ್ಲೇಖಿಸಿದ್ದರು.

ಈ ಪತ್ರಕ್ಕೆ ಸಕಾರತ್ಮಕವಾಗಿ ಸ್ಪಂದಿಸಿರುವ ರೈಲ್ವೆ ಇಲಾಖೆಯ ಅಧಿಕಾರಿಗಳು, ಮೈಸೂರು-ವಾರಾಣಸಿ ಎಕ್ಸ್‌ ಪ್ರೆಸ್‌ ರೈಲಿಗೆ ಹೆಚ್ಚುವರಿ ಬೋಗಿಯನ್ನು ಅಳವಡಿಸಲು ಸಮ್ಮತಿಸಿದೆ. ಅಲ್ಲದೇ ಹವಾನಿಯಂತ್ರಿತ ಕೋಚ್ ಅನ್ನು ಅಳವಡಿಸಲಾಗುವುದು. ಹೀಗಾಗಿ ಫೆಬ್ರವರಿ 4ರಿಂದ ಮೈಸೂರು ವಾರಾಣಸಿ ಎಕ್ಸೆಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿಯ ರೈಲು ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಸಂಸದ ಯದುವೀರ್ ಪ್ರತಿಕ್ರಿಯೆ

ಈ ಕುರಿತು ಇಂದು(ಫೆಬ್ರವರಿ.3) ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಸಂಸದ ಯದುವೀರ್ ಅವರು, ಮಹಾಕುಂಭ ಮೇಳ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಸಂಗಮವಾಗಿದೆ. ಈ ಪುಣ್ಯ ಕಾಲದಲ್ಲಿ ತೀರ್ಥ ಸ್ನಾನ ಮಾಡಲು ಹಲವಾರು ಮಂದಿ ಇಚ್ಛಿಸಿರುತ್ತಾರೆ. ನಮ್ಮ ಕ್ಷೇತ್ರದ ಜನರಿಗೆ ಅನುಕೂಲವಾಗಲೆಂದು ರೈಲ್ವೆ ಇಲಾಖೆಗೆ ಪತ್ರೆ ಬರೆದಿದ್ದೆ ಎಂದು ತಿಳಿಸಿದರು.

ಈಗಾಗಲೇ ಮೈಸೂರು-ವಾರಾಣಸಿ ಎಕ್ಸ್‌ ಪ್ರೆಸ್‌ ರೈಲು ಸಂಚರಿಸುತ್ತಿದೆ. ಇದಕ್ಕೆ ಹೆಚ್ಚುವರಿ ಬೋಗಿಗಳನ್ನು ಅಳವಡಿಸಿದರೆ ನಮ್ಮ ಕ್ಷೇತ್ರದಿಂದ ಯಾತ್ರಿಗಳಿಗೆ ಅನುಕೂಲವಾಗಲಿದೆ ಎಂಬ ಆಲೋಚನೆ ಬಂದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಪತ್ರ ಬರೆದು ಮನವಿ ಸಲ್ಲಿಸಿದ್ದೆ. ಅದಕ್ಕೆ ಇಲಾಖೆಯಿಂದ ಸ್ಪಂದನೆ ಬಂದು ಫೆಬ್ರವರಿಯಿಂದ ಹೆಚ್ಚುವರಿ ಬೋಗಿಗಳ ಸಂಚಾರ ಆರಂಭಿಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದು ನಮ್ಮ ಕ್ಷೇತ್ರದ ಜನರಿಗೆ ಮಹಾಕುಂಭ ಮೇಳದ ಕೊಡುಗೆಯಾಗಿದೆ. ಹೀಗಾಗಿ ಹೆಚ್ಚುವರಿ ಬೋಗಿಗಳ ಸಂಚಾರಕ್ಕೆ ಅವಕಾಶ ನೀಡಿರುವ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಹೇಳಿದರು.

Tags: