ಮೈಸೂರು: ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಯಾದವಗಿರಿ ಸೇವಾಕೇಂದ್ರದಲ್ಲಿ ಏರ್ಪಡಿಸಿದ್ದ ರಕ್ಷಾ ಬಂಧನ ಮಹೋತ್ಸವದಲ್ಲಿ ಭಾಗವಹಿಸಿದ್ದ ಮೇಘಾಲಯ ರಾಜ್ಯಪಾಲ ಸಿ. ಎಚ್. ವಿಜಯಶಂಕರ್ ರವರಿಗೆ ಬಿ. ಕೆ. ಲಕ್ಷ್ಮೀಜಿ ಶ್ರೀರಕ್ಷೆಯನ್ನು ನೀಡಿ ಶುಭ ಹಾರೈಸಿದರು.
ಬಳಿಕ ಮಾತನಾಡಿದ ರಾಜ್ಯಪಾಲ ವಿಜಯಶಂಕರ್, ರಕ್ಷಾ ಬಂಧನದಲ್ಲಿ ಪಾಲ್ಗೊಂಡಿದ್ದಕ್ಕೆ ಅತೀವ ಸಂತಸ ವ್ಯಕ್ತಪಡಿಸಿ ರಾಜಕೀಯ ಜೀವನದ ನೂತನ ಅಧ್ಯಾಯಕ್ಕೆ ತಾವು ಒಮ್ಮನಸ್ಸಿನಿಂದ ಮತ್ತು ಉತ್ಸಾಹದಿಂದ ಹೃದಯವನ್ನು ತೆರೆದುಕೊಂಡಿದ್ದೇನೆ ಎಂದರು.
60 ಶಾಸಕರಿರುವ ಮೇಘಾಲಯದ ಪುಟ್ಟರಾಜ್ಯದ ಜನಸಂಖ್ಯೆಯಲ್ಲಿ ಹೆಚ್ಚಿನoಶ ಬುಡಕಟ್ಟಿನವರೇ ಇದ್ದು ಸರಳ ಜೀವನ ನಡೆಸುತ್ತಾರೆ. ಅಲ್ಲಿ ನಾನು ಮನಃ ಪೂರ್ತಿಯಾಗಿ ಜನಸೇವೆ ಮಾಡಲು ಸಿದ್ಧನಿದ್ದು ತಮ್ಮೆಲ್ಲರ ಆಶೀರ್ವಾದದ ಅಗತ್ಯವಿದೆ ಎಂದು ಹೇಳಿದರು.
ನಾನು ಸಾರ್ವಜನಿಕ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದ ಮಂತ್ರಿಯಾಗಿ, ಸಂಸದನಾಗಿ, ಶಾಸಕನಾಗಿ ಪಡೆದಿರುವ ಅನುಭವವನ್ನು ಅಲ್ಲಿಯ ಜನರ ಸೇವೆಯಲ್ಲಿ ವಿನಿಯೋಗಿಸಲು ಇಚ್ಚಿಸುತ್ತೇನೆ. ಈ ಬಗ್ಗೆ ಪ್ರಧಾನ ಮಂತ್ರಿ ಮೋದಿ ಕೂಡ ನನಗೆ ಸಲಹೆ ಸೂಚನೆಗಳನ್ನು ನೀಡಿದ್ದು ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅವರ ಜೊತೆಯಲ್ಲಿದ್ದು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು ಎಂದಿದ್ದಾರೆ. ಅಲ್ಲಿಂದ ನಾನು ಹಿಂತಿರುಗಿ ಬರುವಷ್ಟರಲ್ಲಿ ಅವರ ಋಣವನ್ನು ತೀರಿಸುತ್ತೇನೆ. ದೈವ ಮತ್ತು ತಮ್ಮೆಲ್ಲರ ಶುಭ ಹಾರೈಕೆ ನನ್ನೊಟ್ಟಿಗೆ ಇದೆ ಎಂದು ಭಾವಿಸುತ್ತೇನೆ, ಎಂದು ಹೇಳಿದರು.