ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾದ ನಂಜನಗೂಡಿನಲ್ಲಿ ಮಹಾಶಿವರಾತ್ರಿ ಹಬ್ಬದ ಸಂಭ್ರಮ ಮನೆಮಾಡಿದೆ.
ಇಂದು ಬೆಳಗಿನ ಜಾವದಿಂದಲೇ ನಂಜನಗೂಡಿಗೆ ಭಕ್ತ ಸಾಗರ ಹರಿದು ಬರುತ್ತಿದ್ದು, ಶ್ರೀಕಂಠೇಶ್ವರನ ದೇವಾಲಯದಲ್ಲಿ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇಂದು ಮಹಾಶಿವರಾತ್ರಿ ಹಬ್ಬದ ಅಂಗವಾಗಿ ದೇವಾಲಯಕ್ಕೆ ಸಾವಿರಾರು ಜನರು ಬರುತ್ತಿದ್ದು, ಅವರೆಲ್ಲ ಸರದಿಯಲ್ಲಿ ನಿಂತು ನಂಜುಂಡೇಶ್ವರನನ್ನು ಕಣ್ತುಂಬಿಕೊಳ್ಳಲು ದೇವಾಲಯದ ಹೊರಭಾಗದಿಂದ ಒಳಭಾಗದವರೆಗೂ ವಿಶೇಷ ದರ್ಶನ ಹಾಗೂ ಉಚಿತ ದರ್ಶನದವರಿಗಾಗಿ ಬ್ಯಾರಿಕೇಡ್ ಅಳವಡಿಸಲಾಗಿದ್ದು ನೀರು-ನೆರಳಿನ ವ್ಯವಸ್ಥೆ ಮಾಡಲಾಗಿದೆ.
ಅನೇಕ ವರ್ಷಗಳಿಂದ ನೀಡಲಾಗುತ್ತಿದ್ದ ಪಾಸ್ ವ್ಯವಸ್ಥೆಯನ್ನು ಈ ಬಾರಿ ಜಿಲ್ಲಾಧಿಕಾರಿಗಳು ರದ್ದುಗೊಳಿಸಿದ್ದು, ಗಣ್ಯರಿಗೆ, ಹಿರಿಯರಿಗೆ, ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಇನ್ನು ಕಪಿಲಾ ನದಿ ದಡದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಸುರಕ್ಷಾ ಸಾಧನಗಳು ಹಾಗೂ ನುರಿತ ಈಜುಗಾರರೊಂದಿಗೆ ಬೀಡು
ಬಿಟ್ಟು ಯಾವುದೇ ಅಪಾಯ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾರೆ.
ನಾಳೆ ಮುಂಜಾನೆಯವರೆಗೆ ನಡೆಯಲಿರುವ ಜಾಗರಣೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇಂದು ಬೆಳಿಗ್ಗೆಯಿಂದ ದೇವಾಲಯಕ್ಕೆ ಆಗಮಿಸಿರುವ ಭಕ್ತರಿಗೆ ದಾಸೋಹ ಭವನದಲ್ಲಿ ಪ್ರಸಾದ ವಿತರಣೆ ನಡೆಯುತ್ತಿದೆ.
ಇಂದು ಬೆಳಗಿನ ಜಾವ ೪.೩೦ಕ್ಕೆ ಶ್ರೀಕಂಠೇಶ್ವರ ದೇವಾಲಯದ ಬಾಗಿಲು ತೆರೆದು ನಾಳೆ ಬೆಳಿಗ್ಗೆ ೫ ಗಂಟೆಯವರೆಗೂ ದೇವಾಲಯದ ಅರ್ಚಕ ಸಮೂಹದ ನೇತೃತ್ವದಲ್ಲಿ ದೇವಾಲಯದಲ್ಲಿ ಜಾವ ಜಾವಕ್ಕೆ ಅಭಿಷೇಕ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.