ಮೈಸೂರು: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ವಕ್ಫ್ ಬಿಲ್ ಮಂಡನೆ ಮಾಡಿರುವುದನ್ನು ಖಂಡಿಸಿ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದ್ದಾರೆ.
ಮೈಸೂರಿನ ಕಾಂಗ್ರೆಸ್ ಕಚೇರಿಯಲ್ಲಿ ಇಂದು(ಏಪ್ರಿಲ್.9) ವಕ್ಫ್ ಬಿಲ್ ಮಂಡನೆ ಮಾಡಿರುವ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ದೇಶದಲ್ಲಿ ಸುಮಾರು 8.72 ಲಕ್ಷ ರೂ. ಮೌಲ್ಯದ 38 ಲಕ್ಷ ಎಕರೆ ವಕ್ಫ್ ಪ್ರಾಪರ್ಟಿ ಇದೆ. ಅವುಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ 32 ವಕ್ಫ್ ಬೋರ್ಡ್‌ಗಳಿವೆ. ಆದರೆ ವಕ್ಫ್ ಆಸ್ತಿಗಳಲ್ಲಿ ಮುಸ್ಲಿಂ ವಕ್ಫ್ ಬೋರ್ಡ್ ಆಸ್ತಿಗಳಿಗಿಂತ ಹಿಂದೂ ದೇವಾಲಯಗಳ ಮುಜರಾಯಿ ಇಲಾಖೆಗೆ ಸೇರಿದ ಆಸ್ತಿಗಳೇ ಅಧಿಕವಾಗಿವೆ ಎಂದು ಹೇಳಿದರು.
ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣ ಈ ನಾಲ್ಕು ರಾಜ್ಯಗಳಲ್ಲೇ ಸುಮಾರು 13 ಲಕ್ಷ ಎಕರೆ ಹಿಂದು ದೇವಾಲಯಗಳ ಆಸ್ತಿ ಇದೆ. ಇಲ್ಲೇ ಇಷ್ಟಿದ್ದರೆ, ಇಡೀ ದೇಶಾದ್ಯಂತ ಇನ್ನೆಷ್ಟು ಇರಹುದು ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಆದರೆ ಬಿಜೆಪಿಯವರ ಪ್ರಮುಖ ಉದ್ದೇಶ ಮುಸಲ್ಮಾನರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಬಿಂಬಿಸುವುದಾಗಿದೆ. ಹೀಗಾಗಿ ವಕ್ಫ್ ಬಿಲ್ ಮಂಡನೆ ವಿರುದ್ಧ ಹೋರಾಟ ಮಾಡಲಾಗುವುದ. ಆದರೆ ಕಾಂಗ್ರೆಸ್ ಪಕ್ಷದಿಂದ ಮುಸಲ್ಮಾನ ಸಮುದಾಯಕ್ಕೆ ಯಾವಾಗಲೂ ಬೆಂಬಲವವಿರುತ್ತದೆ ಎಂದರು.
ಪೌರ ಕಾರ್ಮಿಕರನ್ನು ಮೇ. 1 ರಿಂದ ಖಾಯಂ ಮಾಡುವ ಸಿಎಂ ನಿರ್ಧಾರ ಮಹತ್ವದ ಹೆಜ್ಜೆ
ಇದೇ ಸಂದರ್ಭದಲ್ಲಿ ಪೌರ ಕಾರ್ಮಿಕರನ್ನು ಮೇ.1 ರಿಂದ ಖಾಯಂ ಮಾಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರರ ನಿರ್ಧಾರದ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಪೌರ ಕಾರ್ಮಿಕರನ್ನು ಖಾಯಂಗೊಳಿಸುವುದು ಮಹತ್ವದ ಹೆಜ್ಜೆಯಾಗಿದೆ. ಅವರ ಈ ನಿರ್ಧಾರದಿಂದ ರಾಜ್ಯದಲ್ಲಿರುವ ಸುಮಾರು 7 ಲಕ್ಷದಷ್ಟು ಪೌರ ಕಾರ್ಮಿಕರಿಗೆ ಅನುಕೂಲ ಆಗುತ್ತದೆ. ಅಲ್ಲದೇ ಐದಾರು ಸಾವಿರ ಸಂಬಳ ಪಡೆಯುತ್ತಿದ್ದ ಪೌರ ಕಾರ್ಮಿಕರಿಗೆ 50 ಸಾವಿರ ಸಂಬಳ ಬರುತ್ತದೆ. ಹೀಗಾಗಿ ಅವರ ಬದುಕು ಹಸನಾಗಲಿದ್ದು, ಇಂತಹ ಒಂದು ಮಹತ್ತರವಾದ ತೀರ್ಮಾನವನ್ನು ಸಿಎಂ ಸಿದ್ದರಾಮಯ್ಯ ಕೈಗೊಂಡಿರುವುದು ಸ್ವಾಗತಾರ್ಹ ಎಂದು ತಿಳಿಸಿದರು.