ಮೈಸೂರು : ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುವುದನ್ನು ನಿಲ್ಲಿಸಬೇಕು ಎಂದು ಕುರುಬ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ.
ಗುರುವಾರ ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖಂಡರಾದ ಎಂ.ಶಿವಣ್ಣ, ಜಿ.ಗೋಪಿ, ದೊಳ್ಳೇಗೌಡ ಇನ್ನಿತರರು ವಿಶ್ವನಾಥ್ ಅವರ ಮೇಲೆ ಹರಿಹಾಯ್ದರು. ವಿಶ್ವನಾಥ್ ಅವರ ತೆವಲು ಬಾಯಿಯಿಂದಾಗಿ ಪಾರ್ಲಿಮೆಂಟ್ ಚುನಾವಣೆಯಲ್ಲಿ ಸೋತಿದ್ದುದನ್ನು ಯಾರೂ ಮರೆತಿಲ್ಲ ಎಂದರು.
ಸಿದ್ದರಾಮಯ್ಯನವರ ಮಾತು ಒರಟು, ಆದರೆ ಹೃದಯ ಶ್ರೀಮಂತಿಕೆಯಿಂದ ಕೂಡಿದೆ. ಎಚ್.ವಿಶ್ವನಾಥ್ ಅವರು ವಿನಾಕಾರಣ ಸಿದ್ದರಾಮಯ್ಯ ವಿರುದ್ದ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಹೆಚ್.ಡಿ.ದೇವೇಗೌಡ ಅವರ ಕುಟುಂಬವನ್ನು ಟೀಕಿಸಿದ್ದೇ ವಿಶ್ವನಾಥ್ ಸೋಲಿಗೆ ಕಾರಣವಾಯ್ತು. ಆದರೂ ಅವರು ತಪ್ಪನ್ನು ತಿದ್ದಿಕೊಳ್ಳಲಿಲ್ಲ ಎಂದರು.
ವಿಶ್ವನಾಥ್ ಓರ್ವ ಕೀಳುಮಟ್ಟದ ರಾಜಕಾರಣಿಯಾಗಿದ್ದಾರೆ. ಎಲ್ಲ ಪಕ್ಷಕ್ಕೂ ಹೋಗಿ ಬಂದಿರುವ ಅವರು ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಪಕ್ಷಗಳನ್ನು ಟೀಕಿಸುವ ನೈತಿಕತೆ ಉಳಿಸಿಕೊಂಡಿಲ್ಲ. ಪಕ್ಷ ನಿಷ್ಠೆ ನಿಷ್ಟಯೂ ಅವರಿಗಿಲ್ಲ ಎಂದರು.
ವಿಶ್ವನಾಥ್ ಅವರೆ ನೀವು ಪ್ರಬುದ್ದತೆ, ಸ್ವಾಭಿಮಾನ, ಪ್ರಾಮಾಣಿಕತೆ ಕಳೆದುಕೊಂಡಿದ್ದೀರಿ. ನೀವು ಈ ಕೂಡಲೇ ರಾಜಕೀಯ ನಿವೃತ್ತಿ ಘೋಷಿಸಿ ಎಂದು ಹೇಳಿದರು.
ನಮ್ಮ ಸಮುದಾಯದ ಸ್ವಾಮೀಜಿಗಳಿಗೆ ಎಚ್ಚರಿಕೆ ನೀಡಲು ನೀವು ಯಾರು?. ಸ್ವಾಮೀಜಿ ಅಂದರೆ ೬೫ ಲಕ್ಷ ಜನಸಂಖ್ಯೆ ಇರುವ ಕುರುಬ ಸಮಾಜದ ಪೀಠಾಧಿಪತಿ. ಅವರನ್ನು ನೀವೊಬ್ಬರೇ ಪೀಠಾಧಿಪತಿಯನ್ನಾಗಿ ಮಾಡಿಲ್ಲ. ಸ್ವಾಮೀಜಿಗಳು ಯಾರೊಬ್ಬರ ಹಿಂಬಾಲಕರಲ್ಲ ಎಂದರು.
ಸಿದ್ದರಾಮಯ್ಯ ಎಂದೂ ಕೂಡ ಸ್ವಾಮೀಜಿಗಳ ಮೇಲೆ ಒತ್ತಡ ಹಾಕಿಲ್ಲ. ಇಡೀ ಕುರುಬ ಸಮಾಜ ಸಿದ್ದರಾಮಯ್ಯ ಪರವಾಗಿದೆ. ಸ್ವಾಮೀಜಿಗಳು ಕೂಡ ಸಮಾಜದ ಪರವಾಗಿದ್ದಾರೆ. ಸಮಾಜಕ್ಕೆ ಎಚ್.ವಿಶ್ವನಾಥ್ ಕೊಡುಗೆ ಏನು? ಸಿದ್ದರಾಮಯ್ಯ ಕೊಡುಗೆ ಏನು? ಎಂಬುದರ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಮುಖಂಡರು, ಸಿದ್ದರಾಮಯ್ಯರಿಂದಾಗಿ ಹಲವಾರು ಮಂದಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ವಿಶ್ವನಾಥ್ ಯಾರನ್ನು ಎಂಎಲ್‌ಎ ಮಾಡಿದ್ದಾರೆ ಎಂಬುದನ್ನು ತಿಳಿಸಬೇಕು ಎಂದು ಆಗ್ರಹಿಸಿದರು.
ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸುವ ವಿಚಾರದಲ್ಲಿ ಶಾಸಕ ಶ್ರೀವತ್ಸ ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕುರುಬ ಸಮಾಜದ ಬಗ್ಗೆ ಮಾತನಾಡಲು ಶಾಸಕ ಶ್ರೀವತ್ಸ ಯಾರು?. ಕುರುಬ ಸಮುದಾಯವನ್ನು ಎಸ್‌ಟಿ ಕೆಟಗರಿಗೆ ಸೇರಿಸುವಂತೆ ಒತ್ತಾಯಿಸಿ ೧೯೮೫ರಿಂದಲೂ ಹೋರಾಟ ನಡೆಯುತ್ತಿದೆ ಎಂದರು.
ಇದೀಗ ಸಿದ್ದರಾಮಯ್ಯನವರು ಆ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಇದೀಗ ಚೆಂಡು ಕೇಂದ್ರದ ಅಂಗಳದಲ್ಲಿ ಇದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಂತಿಮ ತೀರ್ಮಾನ ಕೈಗೊಳ್ಳಬೇಕಿದೆ. ಹಾಗಾಗಿ ಶಾಸಕ ಶ್ರೀವತ್ಸ ಅನಗತ್ಯ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೇ ಶಾಸಕ ಶ್ರೀವತ್ಸ ನಿವಾಸದ ಬಳಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.





