Mysore
33
scattered clouds

Social Media

ಭಾನುವಾರ, 20 ಏಪ್ರಿಲ 2025
Light
Dark

ನಾಳೆ ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿವಿಯ 20ನೇ ವಾರ್ಷಿಕ ಘಟಿಕೋತ್ಸವವು ಮಾ. 27ರಂದು ಬೆಳಿಗ್ಗೆ 11ಕ್ಕೆ ಮುಕ್ತ ವಿವಿಯ ಘಟಿಕೋತ್ಸವ ಭವನದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ತಿಳಿಸಿದರು.

ಮುಕ್ತ ವಿವಿಯ ಅತಿಥಿಗೃಹದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,  ಘಟಿಕೋತ್ಸವದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಮೂವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತಿದೆ.  ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರುವರು. ಕೌಶಲ ಅಭಿವೃದ್ಧಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯದ ಕಾರ್ಯದರ್ಶಿ ಅತುಲ್ ಕುಮಾರ್ ತಿವಾರಿ ಘಟಿಕೋತ್ಸವ ಭಾಷಣ ಮಾಡುವರು ಎಂದರು.

ಲೋಕೋಪಯೋಗಿ ಸಚಿವ ಸತೀಶ ಎಲ್.ಜಾರಕಿಹೊಳಿ, ಚಿತ್ರದುರ್ಗದ ಐಡಿಯಲ್ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸಿ.ಎಂ.ಇರ್ಫಾನುಲ್ಲಾ ಷರೀಫ್ ಮತ್ತು ಕಲಬುರಗಿಯ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ದಾಕ್ಷಾಯಿಣಿ ಎಸ್. ಅಪ್ಪಾ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುವುದಾಗಿ ಅವರು ಹೇಳಿದರು.

ಈ ಬಾರಿ 17 ಮಂದಿ ಮಹಿಳೆಯರು ಸೇರಿ 41 ಮಂದಿ ಪಿಎಚ್.ಡಿ ಪಡೆಯುತ್ತಿದ್ದು, 55 ಮಂದಿ ಚಿನ್ನದ ಪದಕ ಹಾಗೂ 58 ಮಂದಿ ನಗದು ಬಹುಮಾನಕ್ಕೆ ಭಾಜನರಾಗಿದ್ದಾರೆ. ಇವರನ್ನೂ ಒಳಗೊಂಡಂತೆ 17,388 ಮಂದಿ ವಿವಿಧ ಪದವಿ ಪಡೆಯಲು ಅರ್ಹರಿದ್ದು, ಈ ಪೈಕಿ6402ಪುರುಷರು ಮತ್ತು10946 ಮಂದಿ ಮಹಿಳೆಯರು ಇದ್ದಾರೆ ಎಂದರು.

15,409 ಮಂದಿ ಮಹಿಳಾ ಅಭ್ಯರ್ಥಿಗಳು ಸೇರಿ ಈ ಬಾರಿ 25109 ಮಂದಿ ಪರೀಕ್ಷೆಗೆ ಹಾಜರಾಗಿದ್ದು,17307 ಮಂದಿ ತೇರ್ಗಡೆ ಹೊಂದಿದ್ದಾರೆ. ಇದರಲ್ಲಿ ಮಹಿಳೆಯರ ಪಾಲು ಶೇ. 70.92ಇದೆ. ಅರ್ಥಶಾಸ್ತ್ರದಲ್ಲಿ 9, ವಾಣಿಜ್ಯಶಾಸ್ತ್ರದಲ್ಲಿ 7, ರಾಜ್ಯಶಾಸ್ತ್ರ ಮತ್ತು ನಿರ್ವಹಣ ಶಾಸ್ತ್ರದಲ್ಲಿ ತಲಾ 6 ಮಂದಿ, ಕನ್ನಡ ವಿಷಯದಲ್ಲಿ 5 ಮಂದಿ, ಇತಿಹಾಸದಲ್ಲಿ 4, ಸೂಕ್ಷ್ಮಜೀವ ವಿಜ್ಞಾನದಲ್ಲಿ 2, ಇಂಗ್ಲಿಷ್ ಮತ್ತು ಆಹಾರ ವಿಜ್ಞಾನ ಮತ್ತು ಪೋಷಣೆ ವಿಷಯಗಳಲ್ಲಿ ತಲಾ ಒಬ್ಬೊಬ್ಬರು ಪಿಎಚ್.ಡಿ ಪದವಿ ಪಡೆದಿದ್ದಾರೆ.

ಸಚಿವರಿಗೆ ಗೌರವ ಡಾಕ್ಟರೇಟ್ ಸಮರ್ಥನೆ: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ರಾಜಕೀಯದ ಕಾರಣಕ್ಕಾಗಲಿ, ಸಚಿವರು ಎಂಬ ಕಾರಣಕ್ಕೆ ಆಗಲಿ ನಾವು ಗೌರವ ಡಾಕ್ಟರೇಟ್ ನೀಡುತ್ತಿಲ್ಲ. ಬದಲಿಗೆ ಅವರ ಸಮಾಜಪರ ಕಾರ್ಯಕ್ರಮಗಳನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ ಎಂದು ಕುಲಪತಿ ಶರಣಪ್ಪ ವಿ. ಹಲಸೆ ಅವರು ಸಮರ್ಥಿಸಿಕೊಂಡರು.

ಗೌರವ ಡಾಕ್ಟರೇಟ್ ಆಯ್ಕೆಗೆ ಪ್ರತ್ಯೇಕ ಸಮಿತಿ ಇರುತ್ತದೆ. ಅಲ್ಲಿಗೆ ಸಚಿವರು ಅಥವಾ ಅವರ ಬೆಂಬಲಿಗರು ಅರ್ಜಿ ಸಲ್ಲಿಸಿರಬಹುದು. ಇದನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಲಾಗಿರುತ್ತದೆ ಎಂದರು. ಕಳೆದ ವರ್ಷ 80 ಸಾವಿರ ವಿದ್ಯಾರ್ಥಿಗಳು ನೋಂದಣಿಮಾಡಿಕೊಂಡಿದ್ದು,ಈಗ ಜನವರಿ ಮಾಸದಲ್ಲಿ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ವರ್ಷ ಒಂದು ಲಕ್ಷ ನೋಂದಣಿ ದಾಟುವ ಸಾಧ್ಯತೆ ಇದೆ ಎಂದು ಹೇಳಿದರು.

ಕುಲಸಚಿವರಾದ ಡಾ.ಎಚ್.ವಿಶ್ವನಾಥ್, ಪ್ರೊ.ಕೆ.ಬಿ.ಪ್ರವೀಣ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Tags: