ಎಚ್‌ಡಿ ಕೋಟೆ: ಕೇರಳದ ವಯನಾಡು ಭಾಗದಲ್ಲಿ ಮಳೆ ಕಡಿಮೆಯಾದ ಪರಿಣಾಮ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಬಳಿಯಿರುವ ಕಬಿನಿ ಜಲಾಶಯದ ಒಳಹರಿವಿನಲ್ಲಿ ಇಳಿಕೆ ಕಂಡು ಬಂದಿದೆ.
ಜಲಾಶಯದ ಇಂದಿನ ಒಳಹರಿವು 15,000 ಕ್ಯೂಸೆಕ್ಸ್‌ಗಳಾಗಿದ್ದು, ಜಲಾಶಯದ ಹೊರಹರಿವನ್ನು 9000 ಕ್ಯೂಸೆಕ್ಸ್‌ಗಳಿಗೆ ಇಳಿಕೆ ಮಾಡಲಾಗಿದೆ. ಜಲಾಶಯದ ಗರಿಷ್ಠ ನೀರಿನ ಮಟ್ಟ 84 ಅಡಿಗಳಾಗಿದ್ದು, ಜಲಾಶಯದ ಇಂದಿನ ನೀರಿನ ಮಟ್ಟ 82 ಅಡಿಗಳಾಗಿದೆ.
ಜಲಾಶಯದಿಂದ ಹೊರಹರಿವನ್ನು ಭಾರೀ ಪ್ರಮಾಣದಲ್ಲಿ ಕಡಿಮೆ ಮಾಡಲಾಗಿದ್ದು, ಕಪಿಲಾ ನದಿ ಪಾತ್ರದ ಜನರು ಕೊಂಚ ನಿರಾಳರಾಗಿದ್ದಾರೆ. ಇನ್ನು ಕಪಿಲಾ ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನತೆ ಪ್ರವಾಹ ಪರಿಸ್ಥಿತಿಯಿಂದ ಹೊರಬರಲು ಇನ್ನೂ ಎರಡು ದಿನ ಬೇಕಾಗಿದ್ದು, ಜನಜೀವನ ಕೊಂಚ ಸಹಜಸ್ಥಿತಿಯತ್ತ ಮರಳುತ್ತಿದೆ.
ಕಪಿಲಾ ನದಿ ಆರ್ಭಟಕ್ಕೆ ತತ್ತರಿಸಿ ಹೋಗಿದ್ದ ಜನತೆ ಈಗ ಮಳೆಯ ಪ್ರಮಾಣ ಕಡಿಮೆಯಾದ್ದರಿಂದ ಕೊಂಚ ನಿರಾಳರಾಗಿದ್ದು, ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ.