ಮೈಸೂರು : ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್-2 ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಜಿಲ್ಲೆಯ ಬಿಳಿಕೆರೆಯ ಹುಲ್ಲೇನಹಳ್ಳಿ ಬಳಿ ಚಿತ್ರೀಕರಣ ಮಾಡಲಾಗುತ್ತಿದೆ.
ನಟ ರಜನಿಕಾಂತ್ ಅವರು ಕಾಲಿವುಡ್‌ನಲ್ಲಿ ಸೂಪರ್ ಸ್ಟಾರ್ ಆಗಿದ್ದರೂ, ಅವರ ಮೂಲ ಕರ್ನಾಟಕ. ಆ ನಂಟು ಇರುವುದರಿಂದಲೋ ಏನೋ ಅವರ ಒಂದಷ್ಟು ಸಿನಿಮಾಗಳು ಕರ್ನಾಟಕದಲ್ಲಿ ಚಿತ್ರೀಕರಣ ಆಗುತ್ತವೆ. ವಿಶೇಷವೆಂದರೆ, ಈ ಹಿಂದೆ ಇದೇ ಹುಲ್ಲೇನಹಳ್ಳಿಯಲ್ಲಿ ವರನಟ ಡಾ. ರಾಜ್‌ಕುಮಾರ್ ಅವರ ಸಿನಿಮಾದ ಚಿತ್ರೀಕರಣ ನಡೆದಿತ್ತು.
ಸದ್ಯದ ಮಾಹಿತಿ ಪ್ರಕಾರ, ಬಿಳಿಕೆರೆಯ ಹುಲ್ಲೇನಹಳ್ಳಿಯ ಸೇತುವೆ ಮೇಲೆ ಸಾಹಸ ಸನ್ನಿವೇಶಗಳ ಚಿತ್ರೀಕರಣ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಮೂರು ದಿನಗಳ ಕಾಲ ಇದೇ ಸ್ಥಳದಲ್ಲಿ ಚಿತ್ರೀಕರಣ ಮಾಡಲಾಗುತ್ತದೆ ಎನ್ನುತ್ತವೆ ಚಿತ್ರತಂಡದ ಮೂಲಗಳು.
ಚಿತ್ರೀಕರಣ ನಡೆಯುತ್ತಿರುವ ವಿಚಾರ ತಿಳಿದು, ರಜನಿಕಾಂತ್ ಅವರನ್ನು ನೋಡಲು ಈಗಾಗಲೇ ಅನೇಕರು ಚಿತ್ರೀಕರಣ ಸ್ಥಳದ ಕಡೆಗೆ ಮುಗಿಬಿದ್ದು ಹೋಗುತ್ತಿದ್ದಾರೆ. ಇನ್ನೂ ಮೂರು ದಿನಗಳ ಕಾಲ ರಜನಿಕಾಂತ್ ಅವರು ಮೈಸೂರಿನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ.
ಚಿತ್ರೀಕರಣ ಸ್ಥಳದ ಬಳಿ ರಜನಿಕಾಂತ್ ಅವರು ಓಡಾಡುತ್ತಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿಂದಿನ ಜೈಲರ್ ಸಿನಿಮಾದ ಗೆಟಪ್‌ನಲ್ಲಿಯೇ ರಜನಿಕಾಂತ್ ವೈರಲ್ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ.
2023ರಲ್ಲಿ ತೆರೆಕಂಡ ಜೈಲರ್ ಸಿನಿಮಾವು ಬಾಕ್ಸ್ ಆಫೀಸ್ ಉಡೀಸ್ ಮಾಡಿತ್ತು. ಆ ಹಿನ್ನೆಲೆಯಲ್ಲಿ ಸನ್ ಪಿಕ್ಚರ್ಸ್ ಸಂಸ್ಥೆಯು ಇದೀಗ ಅದರ ಪಾರ್ಟ್ 2 ಮಾಡುವುದಕ್ಕೆ ಮುಂದಾಗಿದೆ. ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಈ ಬಾರಿ ಜೈಲರ್ ಸಿನಿಮಾದ ಮುಂದುವರಿದ ಭಾಗವನ್ನ ತೆರೆಮೇಲೆ ತರಲು ಸಜ್ಜಾಗಿದ್ದಾರೆ.
ಜೈಲರ್ ನಲ್ಲಿ ನರಸಿಂಹನ ಪಾತ್ರ ಮಾಡಿದ್ದ ಶಿವರಾಜ್‌ಕುಮಾರ್ ಅವರು ಪಾರ್ಟ್-2 ರಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ತೆಲುಗು ನಟ ನಂದಮೂರಿ ಬಾಲಕೃಷ್ಣ ಕೂಡ ಜೈಲರ್ 2 ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಇನ್ನೂ ಮೊದಲ ಪಾರ್ಟ್ ಜೈಲರ್ ಸಿನಿಮಾ ಕೂಡ ಕರ್ನಾಟಕದ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿತ್ತು.





