Mysore
20
broken clouds

Social Media

ಶುಕ್ರವಾರ, 23 ಜನವರಿ 2026
Light
Dark

ಒಳ ಮೀಸಲಾತಿ | ಎಡಗೈಗೂ 6, ಬಲಗೈಗೂ 6 ; ಏನ್‌ ಈ ಹೊಸ ಸೂತ್ರ? ಇಲ್ಲಿದೆ ವಿವರ

cm siddaramaiah

ಬೆಂಗಳೂರು : ಪರಿಶಿಷ್ಟ ಜಾತಿಯೊಳಗೆ ಒಳಮೀಸಲಾತಿ ಕಲ್ಪಿಸಬೇಕು ಎಂಬ ಆಗ್ರಹಗಳಿಗೆ ಮನ್ನಣೆ ನೀಡಿರುವ ರಾಜ್ಯ ಸರ್ಕಾರ, ನಿವೃತ್ತ ನ್ಯಾಯಮೂರ್ತಿ ಎಚ್. ಎನ್‌ ನಾಗಮೋಹನ್‌ದಾಸ್‌ ಆಯೋಗ ಸಲ್ಲಿಸಿರುವ ವರದಿಯಲ್ಲಿರುವ ಜಾತಿವಾರು ವರ್ಗೀಕರಣವನ್ನು ತುಸು ಪರಿಷ್ಕರಿಸಿ ಜಾರಿ ಮಾಡುವ ಮಹತ್ವದ ತೀರ್ಮಾನ ಕೈಗೊಂಡಿದ್ದು, ಈ ಬಗ್ಗೆ ಎರಡು ದಿನಗಳಲ್ಲಿ ಆದೇಶ ಹೊರಡಿಸಲು ತೀರ್ಮಾನಿಸಲಾಗಿದೆ.

101 ಪರಿಶಿಷ್ಟ ಜಾತಿಗಳನ್ನು ಮೂರು ಗುಂಪುಗಳಾಗಿ ಅಂದರೆ ಎಡಗೈ, ಬಲಗೈ ಮತ್ತು ಸ್ಪಶ್ಯ ಎಂದು ವರ್ಗೀಕರಿಸಲು ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿದೆ. ಪರಿಶಿಷ್ಟ ಜಾತಿಯವರಿಗೆ ಶೇ 17ರಷ್ಟಿರುವ ಮೀಸಲಾತಿಯನ್ನು ಎಡಗೈ ಮತ್ತು ಬಲಗೈ ಸಂಬಂಧಿತ ಜಾತಿಗಳ ಗುಂಪಿಗೆ ತಲಾ ಶೇ 6, ಕೊರಚ, ಕೊರಮ, ಭೋವಿ, ಲಂಬಾಣಿ ಜಾತಿಗಳನ್ನು ಒಳಗೊಂಡ ಸ್ಪೃಶ್ಯ’ ಗುಂಪುಗಳಿಗೆ ಶೇ 5 ಮೀಸಲಾತಿ ಹಂಚಿಕೆ ಮಾಡಲು ತೀರ್ಮಾನಿಸಲಾಗಿದೆ ಎಂದು ಗೊತ್ತಾಗಿದೆ.

ಪರಿಶಿಷ್ಟ ಜಾತಿಯಲ್ಲಿ 101 ಮೂಲ ಜಾತಿಗಳನ್ನು ಆಯೋಗವು ಐದು ಗುಂಪುಗಳಾಗಿ ವರ್ಗೀಕರಿಸಿ, ಲಭ್ಯವಿರುವ ಶೇ 17 ಮೀಸಲಾತಿಯನ್ನು ಪ್ರವರ್ಗ ‘ಎ’ಗೆ ಶೇ 1 (ಒಟ್ಟು ಜಾತಿಗಳು 59 ಜಾತಿಗಳು), ಪ್ರವರ್ಗ ‘ಬಿ’ಗೆ ಶೇ 6 (18 ಜಾತಿಗಳು), ಪ್ರವರ್ಗ ‘ಸಿ’ಗೆ ಶೇ 5 (17 ಜಾತಿಗಳು), ಪ್ರವರ್ಗ ‘ಡಿ’ಗೆ ಶೇ 4 (4 ಜಾತಿಗಳು), ಪ್ರವರ್ಗ ‘ಇ’ಗೆ ಶೇ 1ರಂತೆ (3 ಜಾತಿಗಳು) ಹಂಚಿಕೆ ಮಾಡಿತ್ತು. ಆಯೋಗದ ವರದಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಸಿದ್ಧಪಡಿಸಿದ್ದ ಟಿಪ್ಪಣಿಯನ್ನು ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್‌ ಅವರು ಸಚಿವ ಸಂಪುಟ ಸಭೆಯಲ್ಲಿ ವಿವರಿಸಿದರು ಎಂದು ಮೂಲಗಳು ತಿಳಿಸಿವೆ.

ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ನೀಡಲು ರಾಜ್ಯದಾದ್ಯಂತ ನಡೆದ ಸಮೀಕ್ಷೆಯ ದತ್ತಾಂಶಗಳ ಕುರಿತಂತೆ ಆಯೋಗದ ವರದಿಯಲ್ಲಿರುವ ಅಂಶಗಳ ಪ್ರಾತ್ಯಕ್ಷಿಕೆ ನೀಡಿದ ಮಣಿವಣ್ಣನ್, ಎಲ್ಲರನ್ನು ಸಮನಾಗಿ ಕಾಣುವ ಸಾಮಾಜಿಕ ನ್ಯಾಯದ ವರದಿ ಬಂದಿದೆ ಎಂದು ಸಭೆಗೆ ಮಾಹಿತಿ ನೀಡಿದರು ಎಂದು ಗೊತ್ತಾಗಿದೆ.

ನಮಗೂ ಸಮಾನ ಮೀಸಲಾತಿ ಇರಲಿ ಎಂದು ಬಲಗೈ ಸಮುದಾಯದ ಜಿ. ಪರಮೇಶ್ವರ ಮತ್ತು ಎಚ್.ಸಿ. ಮಹದೇವಪ್ಪ ಅವರು ಸಭೆಯಲ್ಲಿ ಕೋರಿಕೆ ಮುಂದಿಟ್ಟರೆ, ನಾವೂ ದಲಿತರೆ. ಉಪ ಜಾತಿಗಳಿಗೆ ಮೀಸಲಾತಿ ಹಂಚಿಕೆ ವೇಳೆ ಭೋವಿ ಸಮುದಾಯಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳಬೇಕು ಎಂದು ಬೋವಿ ಸಮುದಾಯದ ಶಿವರಾಜ್ ತಂಗಡಗಿ ಹೇಳಿದರು ಎಂದು ಗೊತ್ತಾಗಿದೆ.

ನಮ್ಮದು ಜಾತಿ ಪ್ರಮಾಣಪತ್ರ ಕೇಳುತ್ತಾರೆ. ಆದರೆ. ಮೂಲ ಜಾತಿ ಗೊತ್ತಿಲ್ಲದ ಕಾರಣಕ್ಕೆ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ನಮೂದಿಸಿದ್ದಾರೆ. ಈ ಗೊಂದಲ ಮೊದಲು ಬಗೆಹರಿಯಲಿ ಎಂದು ಪರಮೇಶ್ವರ ಸಲಹೆ ನೀಡಿದರು ಎಂದು ಗೊತ್ತಾಗಿದೆ.

ನಾಗಮೋಹನದಾಸ್‌ ಆಯೋಗ ಮಾಡಿರುವ ಜಾತಿಗಳ ವರ್ಗೀಕರಣದ ಬಗ್ಗೆ ವಿಸ್ತಾರವಾಗಿ ಚರ್ಚಿಸುವ ಅಗತ್ಯವಿದೆ ಎಂದು ಸಮಾಜ ಕಲ್ಯಾಣ ಇಲಾಖೆಯು ಸಚಿವ ಸಂಪುಟ ಸಭೆಗೆ ಟಿಪ್ಪಣಿ ನೀಡಿತ್ತು.

Tags:
error: Content is protected !!