ಮೈಸೂರು : ಸಾರ್ವಜನಿಕ ಸಭೆ, ಸಮಾರಂಭಗಳಲ್ಲಿ ನಡೆದುಕೊಳ್ಳುವ ರೀತಿ ಹಾಗೂ ಅತಿಥಿ ಶಿಕ್ಷಕರ ನೇಮಕದಲ್ಲಿ ಹಣ ಪಡೆದು ನಿಯೋಜನೆ ಮಾಡಿಕೊಳ್ಳುತ್ತಿರುವ ದೂರಿನ ಹಿನ್ನೆಲೆಯಲ್ಲಿ ಹುಣಸೂರು ಕ್ಷೇತ್ರ ಶಿಕ್ಷಣಾಧಿಕಾರಿ ವಿರುದ್ಧ ತನಿಖೆ ನಡೆಸಿ ಒಂದು ವಾರದಲ್ಲಿ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ಡಿಡಿಪಿಐಗೆ ಸೂಚನೆ ನೀಡಿದರು.
ದಿಶಾ ಸಭೆಯಲ್ಲಿ ಹುಣಸೂರು ಶಿಕ್ಷಣಾಧಿಕಾರಿ ವರ್ತನೆ ಬಗ್ಗೆ ಶಾಸಕ ಜಿ.ಡಿ.ಹರೀಶ್‌ಗೌಡ ಅವರು ಪ್ರಸ್ತಾಪಿಸಿ, ಅತಿಥಿ ಶಿಕ್ಷಕರ ನೇಮಕದಲ್ಲಿ ಒಬ್ಬೊಬ್ಬರಿಂದ ೨-೩ ಸಾವಿರ ರೂ.ಗಳನ್ನು ಪಡೆದು ನೇಮಕ ಮಾಡುತ್ತಿದ್ದಾರೆ. ಅವರ ವಿರುದ್ಧ ದೂರುಗಳು ಬರುತ್ತಿದ್ದರೂ ಯಾಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ, ಬಿಇಒ ಬಗ್ಗೆ ಒಂದು ವಾರದಲ್ಲಿ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಡಿಡಿಪಿಐಗೆ ಸೂಚನೆ ನೀಡಿದರು.