ಮೈಸೂರು: ಭಾರತವು ಆಗಸ್ಟ್ 15 ಗುರುವಾರದಂದು ತನ್ನ 78ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲು ಸಜ್ಜಾಗಿದೆ. ಈ ದಿನವನ್ನು ರಾಷ್ಟ್ರದ ಇತಿಹಾಸದ ಮೈಲಿಗಲ್ಲು ಎಂದು ಗುರುತಿಸಲಾಗುತ್ತದೆ.
ನೂರಾರು ವರ್ಷಗಳ ಕಾಲ ಪರಕೀಯರ ಕಬಂಧ ಬಾಹುಗಳಲ್ಲಿ ಬಂಧಿಯಾಗಿದ್ದ ದೇಶ ತನ್ನ ವೀರಾಗ್ರಣಿ ಮಕ್ಕಳ ತ್ಯಾಗ ಬಲಿದಾನಗಳ ಫಲವಾಗಿ ಪರಂಗಿಗಳನ್ನ ಈ ನೆಲದಿಂದ ಶಾಶ್ವತವಾಗಿ ಹೊರದಬ್ಬಿ, ಸ್ವಾತಂತ್ರ್ಯಗೊಂಡು ನಮ್ಮದೇ ಆದ ಸಂವಿಧಾನವನ್ನು ಅಳವಡಿಸಿಕೊಂಡು ಪ್ರತಿ ವರ್ಷ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರರನ್ನು ನೆನೆದು ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.
ಹಿಂಸಾ, ಅಹಿಂಸಾ ಎರಡರ ಸಮ್ಮಿಶ್ರಣದ ಧರ್ಮಬೇಧ, ಜಾತಿಬೇಧ, ಲಿಂಗಬೇಧವಿಲ್ಲದೇ, ಸರ್ವ ವಯೋಮಾನದವರು ಸ್ವಾತಂತ್ರ್ಯ ಪಡೆಯುವುದೊಂದೇ ಪರಮಗುರಿ ಎಂಬ ಒಂದು ಸಾಲಿನ ಧ್ಯೇಯ ವಾಕ್ಯದ ಹೋರಾಟದ ಫಲವೇ ಇಂದು ನಾವೆಲ್ಲಾ ಸ್ವಚ್ಚಂದದೊಂದಿಗೆ ಅನುಭವಿಸುತ್ತಿರುವ ಸ್ವಾತಂತ್ರ್ಯವಾಗಿದೆ.
ಈ ಹಿನ್ನೆಲೆ, ಮೈಸೂರು ಜಿಲ್ಲಾಡಳಿತ ವತಿಯಿಂದ 78 ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಯೋಜಿಸಿದ್ದು, ನಗರದ ಪಂಜಿನ ಕವಾಯತು ಮೈದಾನದಲ್ಲಿ ಸ್ವಾತಂತ್ರ್ಯೋತ್ಸವದ ಸಂಭ್ರಮ ಕಳೆಗಟ್ಟಿದೆ.
ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಕ್ಕು ಮತ್ತು ಬೃಹತ್ ಕೈಗಾರಿಕಾ ಕೇಂದ್ರ ಸಚಿವರಾದ ಎಚ್.ಡಿ ಕುಮಾರಸ್ವಾಮಿ ಅವರ ಘನ ಉಪಸ್ಥಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪನವರು ಧ್ವಜಾರೋಹಣ ಮಾಡಲಿದ್ದು, ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವಿರ್ ಸೇಠ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಪಶು ಸಂಗೋಪನೆ ಮತ್ತು ರೇಷ್ಮೆ ಇಲಾಖೆ ಸಚಿವರಾದ ಕೆ.ವೆಂಕಟೇಶ್, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ನಿಗಮದ ಅಧ್ಯಕ್ಷರು ಹಾಗೂ ಹೆಚ್.ಡಿ ಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅನಿಲ್ ಕುಮಾರ್ ಸಿ, ಚಾಮುಂಡೇಶ್ವರಿ ವಿದ್ಯುತ್ ನಿಗಮ ನಿಯಮಿತದ ಅಧ್ಯಕ್ಷರಾದ ಎ.ಬಿ ರಮೇಶ್ ಬಂಡಿ ಸಿದ್ದೇಗೌಡ ಹಾಗೂ ಕರ್ನಾಟಕ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ.ಪುಷ್ಪ ಅಮರನಾಥ್ ಅವರು ಗೌರವ ಉಪಸ್ಥಿತರಿರಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಶಾಸಕರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರದ ಶಾಸಕರಾದ ಸುನಿಲ್ ಬೋಸ್ ಅವರು ಆಗಮಿಸಲಿದ್ದಾರೆ.
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಟಿ ದೇವೇಗೌಡ, ಕೃಷ್ಣರಾಜನಗರ ವಿಧಾನಸಭಾ ಶಾಸಕರಾದ ರವಿಶಂಕರ್ ಡಿ, ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ. ಹರೀಶ್ ಗೌಡ, ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಎಸ್ ಶ್ರೀವತ್ಸ, ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ.ಡಿ ಹರೀಶ್ ಗೌಡ, ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕರಾದ ದರ್ಶನ್ ದೃವನಾರಾಯಣ್, ಹಾಗೂ ವಿಧಾನ ಪರಿಷತ್ ನ ಸದಸ್ಯರುಗಳಾದ ಹೆಚ್.ವಿಶ್ವನಾಥ್, ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಮಧು ಜಿ.ಮಾದೇಗೌಡ, ಡಾ.ಯತಿಂದ್ರ.ಎಸ್ ಮತ್ತು ವಿವೇಕಾನಂದ.ಎಸ್ ಅವರು ಸಮಾರಂಭದ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ನಿಗಮ ಮಂಡಳಿಗಳ ಅಧ್ಯಕ್ಷರುಗಳಾದ, ಕೆ.ಮರೀಗೌಡ, ಅಧ್ಯಕ್ಷರು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ, ಅಯೂಬ್ ಖಾನ್,ಅಧ್ಯಕ್ಷರು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಹಾಗೂ ಮರಿಸ್ವಾಮಿ ಅಧ್ಯಕ್ಷರು ಅಚ್ಚುಕಟ್ಟು ಪ್ರಾಧಿಕಾರ, ಕಾವೇರಿ ಜಲಾನಯನ ಯೋಜನೆ ಮೈಸೂರು ಇವರುಗಳು ಪಾಲ್ಗೊಳ್ಳಲಿದ್ದಾರೆ. ಭಾರತಾಂಬೆಯ ಮಕ್ಕಳಾದ ನಾವು ತಾಯಿಗೆ ನಮಿಸುತ್ತ 78 ನೇ ಸ್ವಾತಂತ್ರ್ಯ ಹಬ್ಬದಲ್ಲಿ ಭಾಗಿಯಾಗೋಣ.
ಸಂಜೆ 5 ಗಂಟೆಗೆ ಕರ್ನಾಟಕ ಕಲಾಮಂದಿರದಲ್ಲಿ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ವರ್ಷ ಸರ್ಕಾರವು ಹರ್‌ಘರ್ ತಿರಂಗಾ ಅಭಿಯಾನ್ ಮೂಲಕ ಸಾರ್ವಜನಿಕ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತಿದೆ. ನಾಗರಿಕರು ತಮ್ಮ ಮನೆ ಮತ್ತು ವ್ಯವಹಾರ ಸ್ಥಳಗಳಲ್ಲಿ ಹೆಮ್ಮೆಯಿಂದ ರಾಷ್ಟ್ರಧ್ವಜವನ್ನು ಪ್ರದರ್ಶಿಸಲು ಒತ್ತಾಯಿಸಿದೆ.